ರಾಜಸ್ಥಾನ: ಯುವಕನ ಥಳಿಸಿ ಹತ್ಯೆಗೈದ ಗುಂಪು
ಜೈಪುರ, ಅ. 29: ಜನ್ಮ ದಿನಾಚಾರಣೆಯಲ್ಲಿ ನಡೆದ ಸಣ್ಣ ವಿವಾದವೊಂದಕ್ಕೆ ಸಂಬಂಧಿಸಿ ಗುಂಪೊಂದು 24 ವರ್ಷದ ಯುವಕನೋರ್ವನನ್ನು ಥಳಿಸಿ ಹತ್ಯೆಗೈದ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲೆ ಶನಿವಾರ ರಾತ್ರಿ ನಡೆದಿದೆ.
ಮೃತಪಟ್ಟ ಯುವಕನನ್ನು ದಿಲ್‌ಸುಖ್ ಗೊಡಾರ ಎಂದು ಗುರುತಿಸಲಾಗಿದೆ.
ಚುರುವಿನ ರತನ್‌ಗಢ ಪ್ರದೇಶದಲ್ಲಿರುವ ಫಾರ್ಮ್‌ನಲ್ಲಿ ಆಯೋಜಿಸಲಾಗಿದ್ದ ಜನ್ಮದಿನಾಚರಣೆಯ ಸಂದರ್ಭ ಈ ಘಟನೆ ನಡೆದಿದೆ. ಸಣ್ಣ ವಿವಾದಕ್ಕೆ ಸಂಬಂಧಿಸಿ 6 ಮಂದಿಯ ತಂಡ ಗೊಡಾರ ಅವರ ಮೇಲೆ ದೊಣ್ಣೆ, ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದೆ.
ಈ ದಾಳಿಯಲ್ಲಿ ಗಂಭೀರ ಗಾಯಗೊಂಡ ಗೊಡಾರ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ, ವೈದ್ಯರು ಆತ ಮೃತಪಟ್ಟಿದ್ದಾನೆ ಎಂದು ಘೋಷಿಸಿದರು.
ಈ ಘಟನೆ ಕುರಿತಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಆರೋಪಿಗಳನ್ನು ಬಂಧಿಸಲು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಜ್ಞರು ಕೂಡ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಚುರು ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ಆರೋಪಿಗಳನ್ನು ಬಂಧಿಸಲು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಇದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.