ರಜೌರಿ: ಮುಂದುವರಿದ ಎನ್ಕೌಂಟರ್; ಇನ್ನೋರ್ವ ಯೋಧ ಹುತಾತ್ಮ
ರಜೌರಿ/ಜಮ್ಮು: ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಜೊತೆ ಗುಂಡಿನ ಕಾಳಗವು ಗುರುವಾರವೂ ಮುಂದುವರಿದಿದ್ದು, ಗುರುವಾರ ಇನ್ನೋರ್ವ ಯೋಧ ಹುತಾತ್ಮನಾಗಿದ್ದಾನೆ. ಇದರೊಂದಿಗೆ ಬುಧವಾರದಿಂದೀಚೆಗೆ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟ ಯೋಧರ ಒಟ್ಟು ಸಂಖ್ಯೆ 5ಕ್ಕೇರಿದೆ. ಲಷ್ಕರೆ ತಯ್ಯಬಾ ಗುಂಪಿಗೆ ಸೇರಿದ ಉಗ್ರನೊಬ್ಬನನ್ನು ಕೂಡಾ ಇಂದು ಹತ್ಯೆಗೈಯಲಾಗಿದೆಯೆಂದು ರಕ್ಷಣಾ ಪಡೆಗಳ ವಕ್ತಾರರೊಬ್ಬರು ತಿಳಿಸಿದ್ದಾರೆ.
ರಜೌರಿ ಜಿಲ್ಲೆಯ ಧರ್ಮಸಾಲಾದ ಬಾಜಿಮಲ್ ಪ್ರದೇಶದಲ್ಲಿ ಬುಧವಾರ ಉಗ್ರಗಾಮಿಗಳ ವಿರುದ್ಧ ನಡೆದ ಎನ್ಕೌಂಟರ್ ವೇಳೆ ವಿಶೇಷ ಪಡೆಗಳ ಇಬ್ಬರು ಕ್ಯಾಪ್ಟನ್ ಗಳು ಸೇರಿದಂತೆ ನಾಲ್ವರು ಸೇನಾಸಿಬ್ಬಂದಿ ಹುತಾತ್ಮರಾಗಿದ್ದರು ಹಾಗೂ ಓರ್ವ ಮೇಜರ್ ಹಾಗೂ ಇಬ್ಬರು ಯೋಧರಿಗೆ ಗಾಯಗಳಾಗಿವೆ.
ಸೇನಾ ಪಡೆಗಳು ಹಾಗೂ ಜಮ್ಮುಕಾಶ್ಮೀರ ಪೊಲೀಸರ ಜಂಟಿ ಪಡೆಗಳು ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭ ಅವರೆಡೆಗೆ ಉಗ್ರರು ಗುಂಡುಹಾರಿಸಿದಾಗ ಘರ್ಷಣೆ ಭುಗಿಲೆದ್ದಿತ್ತು. ಗಾಯಾಳುಗಳನ್ನು ಬಾಜಿಮಾಲ್ ಪ್ರದೇಶದಲ್ಲಿರುವ ಸೇನಾ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಮೂಲಗಳು ತಿಳಿಸಿವೆ.
ನಿನ್ನೆ ರಾತ್ರಿಯ ಆನಂತರ ಸ್ಥಗಿತಗೊಂಡಿದ್ದ ಗುಂಡಿನ ಚಕಮಕಿಯು ಗುರುವಾರ ಬೆಳಗ್ಗೆಯೂ ಮುಂದುವರಿಯಿತು. ಇಡೀ ಪ್ರದೇಶವನ್ನು ಭದ್ರತಾಪಡೆಗಳು ಸುತ್ತುವರಿದಿವೆ. ದಟ್ಟಾರಣ್ಯದಿಂದ ಕೂಡಿದ ಪ್ರದೇಶದಿಂದ ಉಗ್ರರು ಪಲಾಯನಗೈಯದಂತೆ ತಡೆಯಲು ಹೆಚ್ಚುವರಿ ಭದ್ರತಾಪಡೆಗಳನ್ನು ನಿಯೋಜಿಸಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಗುರುವಾರ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಪಾಕ್ ಉಗ್ರನನ್ನು ಹತ್ಯೆಗೈಯಲಾಗಿದ್ದು ಆತನನ್ನು ಖಾರಿ ಎಂದು ಗುರುತಿಸಲಾಗಿದೆಯೆಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ. ಉಗ್ರ ಖಾರಿಯು ಪಾಕಿಸ್ತಾನ ಹಾಗೂ ಅಫ್ಘಾನ್ ಮುಂಚೂಣಿ ಪ್ರದೇಶದಲ್ಲಿ ತರಬೇತಿ ಪಡೆದನಾಗಿದ್ದಾನೆ. ಆತ ಲಷ್ಕರೆ ತಯ್ಯಬಾ ಸಂಘಟನೆಯಲ್ಲಿ ಉನ್ನತ ಮಟ್ಟದ ಉಗ್ರಗಾಮಿ ನಾಯಕನಾಗಿದ್ದನೆಂದು ಅವರು ತಿಳಿಸಿದ್ದಾರೆ.
ಖಾರಿ ಕಳೆದ ಒಂದು ವರ್ಷದಿಂದ ರಜೌರಿ-ಪೂಂಚ್ ಪ್ರದೇಶದಲ್ಲಿ ತನ್ನ ಗುಂಪಿನೊಂದಿಗೆ ಸಕ್ರಿಯವಾಗಿದ್ದ. ಡಾಂಗ್ರಿ ಹಾಗೂ ಕಾಂಡಿಯಲ್ಲಿ ನಡೆದ ದಾಳಿಗಳ ಸೂತ್ರಧಾರಿಯಾಗಿದ್ದನೆಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಈ ಎನ್ಕೌಂಟರ್ನಲ್ಲಿ ಈವರೆಗೆ ಇಬ್ಬರು ಉಗ್ರರನ್ನು ಹತ್ಯೆಗೈಯಲಾಗಿದೆಯೆಂದು ಅವರ ತಿಳಿಸಿದ್ದಾರೆ.