ಪ್ರಧಾನಿ ಮೋದಿ ಜೊತೆ ಬಹಿರಂಗ ಚರ್ಚೆಗೆ ಸಿದ್ಧ: ರಾಹುಲ್ ಗಾಂಧಿ

Update: 2024-05-11 16:21 GMT

ನರೇಂದ್ರ ಮೋದಿ ,  ರಾಹುಲ್‌ಗಾಂಧಿ  | PC : PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜೊತೆ ಬಹಿರಂಗ ಚರ್ಚೆ ನಡೆಸಬೇಕೆಂದು ಕೋರಿ ಇಬ್ಬರು ಮಾಜಿ ನ್ಯಾಯಾಧೀಶರು ಹಾಗೂ ಓರ್ವ ಹಿರಿಯ ಪತ್ರಕರ್ತರ ಮನವಿಯನ್ನು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಶನಿವಾರ ಸ್ವೀಕರಿಸಿದ್ದಾರೆ.

ಮಾಜಿ ನ್ಯಾಯಾಧೀಶರಾದ ಮದನ್ ಬಿ. ಲೋಕುರ್, ಅಜಿತ್ ಪಿ.ಶಾ ಹಾಗೂ ಹಿರಿಯ ಪತ್ರಕರ್ತ ಎನ್.ರಾಮ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಗೆ ಪತ್ರ ಬರೆದು, ಉಭಯ ನಾಯಕರ ನಡುವೆ ಬಹಿರಂಗ ಚರ್ಚೆಯಾಗಬೇಕೆಂದು ಕೋರಿದ್ದರು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಬ್ಬರೂ ಪರಸ್ಪರರ ವಿರುದ್ಧ ಆರೋಪಗಳನ್ನು ಹೊರಿಸುತ್ತಿರುವುದು ಹಾಗೂ ಸವಾಲುಗಳನ್ನು ಒಡ್ಡುತ್ತಿರುವುದು ಮಾತ್ರವೇ ಕೇಳಿ ಬರುತ್ತಿದೆ. ಆದರೆ ಇವರಿಬ್ಬರಿಂದಲೂ ಯಾವುದೇ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ನೀಡಿರುವುದನ್ನು ತಾವು ಕೇಳಿಲ್ಲವೆಂದು ಅವರು ಪತ್ರದಲ್ಲಿ ತಿಳಿಸಿದ್ದರು.

ಈ ಆಹ್ವಾನಕ್ಕೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ರಾಹುಲ್ ಅವರು, ‘‘ಆರೋಗ್ಯಕರ ಪ್ರಜಾಪ್ರಭುತ್ವದ ಒಂದು ವೇದಿಕೆಯಿಂದ ದೇಶ ಭವಿಷ್ಯದ ಕುರಿತ ತಮ್ಮ ದೂರದೃಷ್ಟಿಯನ್ನು ಮುಂದಿಡಲು ರಾಜಕೀಯ ಪಕ್ಷಗಳಿಗೆ ಇದೊಂದು ಸಕಾರಾತ್ಮಕ ಉಪಕ್ರಮವಾಗಲಿದೆ’’ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಈ ಉಪಕ್ರಮವನ್ನು ಸ್ವಾಗತಿಸಲಿದೆ ಹಾಗೂ ಸಂವಾದಕ್ಕೆ ಆಹ್ವಾನವನ್ನು ಸ್ವೀಕರಿಸಲಿದೆ. ಈ ಸಂವಾದದಲ್ಲಿ ಪ್ರಧಾನಿಯವರು ಕೂಡಾ ಪಾಲ್ಗೊಳ್ಳಬೇಕೆಂದು ದೇಶವು ನಿರೀಕ್ಷಿಸುತ್ತಿದೆ’’ ಎಂದು ರಾಹುಲ್ ಹೇಳಿದ್ದಾರೆ.

ಈ ಮಧ್ಯೆ ಮದನ್ ಲೋಕುರ್, ಅಜಿತ್ ಪಿ.ಶಾ ಹಾಗೂ ಎನ್.ರಾಮ್ ಅವರಿಗೆ ರಾಹುಲ್ ಈ ಬಗ್ಗೆ ಪತ್ರವನ್ನು ಕೂಡಾ ಬರೆದಿದ್ದು, ಆಹ್ವಾನದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸಿರುವುದಾಗಿ ಹೇಳಿದ್ದಾರೆ. ‘‘ಚುನಾವಣೆಯಲ್ಲಿ ಹೋರಾಡುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳ ನಾಯಕರಿಂದ ಮುಖಾಮುಖಿ ಸಂವಾದವನ್ನು ಆಲಿಸಲು ಸಾರ್ವಜನಿಕರಿಗೆ ಹಕ್ಕಿದೆ. ನಾನಾಗಲಿ ಅಥವಾ ಕಾಂಗ್ರೆಸ್ ಅಧ್ಯಕ್ಷರಾಗಲಿ ಇಂತಹ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಂತಸಪಡುತ್ತೇವೆ’’ ಎಂದು ರಾಹುಲ್ ಪತ್ರದಲ್ಲಿ ಹೇಳಿದ್ದಾರೆ.

ಇಂತಹ ಸಾರ್ವಜನಿಕ ಸಂವಾದವು ಜನರನ್ನು ಸುಶಿಕ್ಷಿತರನ್ನಾಗಿಸುವುದಲ್ಲದೆ, ಒಂದು ಮಹಾನ್ ಮೇಲ್ಪಂಕ್ತಿಯನ್ನು ಹಾಕಿಕೊಡಲಿದೆ. ಒಂದು ಉತ್ಪಾದಕ ಹಾಗೂ ಐತಿಹಾಸಿಕ ಚರ್ಚೆಯಲ್ಲಿ ಪಾಲ್ಗೊಳ್ಳುವುದನ್ನು ನಾನು ಎದುರು ನೋಡುತ್ತಿದ್ದೇನೆ’’ ಎಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News