ಶಿಮ್ಲಾದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗಿದೆ ಎಂದ ಕಾಂಗ್ರೆಸ್ ಸಚಿವ

Update: 2024-09-06 15:07 GMT

ಹಿಮಾಚಲಪ್ರದೇಶ: ಶಿಮ್ಲಾದಲ್ಲಿ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹಿಮಾಚಲ ಪ್ರದೇಶದ ಸಚಿವ ಮತ್ತು ಕಾಂಗ್ರೆಸ್ ನಾಯಕ ಅನಿರುದ್ಧ್ ಸಿಂಗ್ ಆರೋಪಿಸಿದ್ದು, ಇದಕ್ಕೆ ಸ್ವಪಕ್ಷದಲ್ಲೇ ವಿರೋಧ ವ್ಯಕ್ತವಾಗಿದೆ.

ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಅನಿರುದ್ಧ್ ಸಿಂಗ್, ಶಿಮ್ಲಾದ ಸಂಜೌಲಿ ಮಸೀದಿಯ ನಿರ್ಮಾಣದ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಮಸೀದಿಯ ಅಕ್ರಮ ನಿರ್ಮಾಣವು ಈ ಪ್ರದೇಶದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಮಸೀದಿ ನಿರ್ಮಾಣಕ್ಕೆ ಮುನ್ನ ಆಡಳಿತದಿಂದ ಅನುಮತಿ ಪಡೆದಿದ್ದಾರೆಯೇ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಅನಿರುದ್ ಸಿಂಗ್ ಪ್ರಶ್ನಿಸಿದ್ದಾರೆ.

ಸಿಂಗ್ ಅವರ ಆರೋಪಗಳನ್ನು ಪಕ್ಷದ ಇತರ ಶಾಸಕರು ಮತ್ತು ಇತರ ಸರ್ಕಾರದ ಮಂತ್ರಿಗಳು ವಿರೋಧಿಸಿದ್ದಾರೆ.

ಈ ಮಧ್ಯೆ ಮಸೀದಿ ನಿರ್ಮಾಣವನ್ನು ವಿರೋಧಿಸಿ ಹಿಂದುತ್ವ ಸಂಘಟನೆಗಳ ಗುಂಪು ಆ ಪ್ರದೇಶದಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ಕೂಡ ನಡೆಸಿದೆ.

ಅನುಮತಿ ಇಲ್ಲದೆ ಮಸೀದಿಯ ಕಟ್ಟಡ ಕಾಮಗಾರಿ ಆರಂಭಿಸಿದ್ದು, ಅದೊಂದು ಅಕ್ರಮ ಕಟ್ಟಡವಾಗಿದೆ. ಮೊದಲು ಒಂದು ಮಹಡಿಯ ಕೆಲಸ ಪೂರ್ತಿಗೊಳಿಸಿ ಮತ್ತೆ ಅದನ್ನು ಮುಂದುವರಿಸಲಾಗಿದೆ ಎಂದು ಹೇಳಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳಲ್ಲಿ ಅವರಿಗೆ ಅಭ್ಯಾಸವಿದೆ. ಅವರು 5 ಅಂತಸ್ತಿನ ಮಸೀದಿಯನ್ನು ನಿರ್ಮಿಸಿದ್ದಾರೆ. ಈ ಸಂಪೂರ್ಣ ಪ್ರಕರಣವನ್ನು ತನಿಖೆ ಮಾಡಬೇಕು ಎಂದು ಸಚಿವರು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಮಸೀದಿಯ ನಿರ್ಮಾಣ ಹೆಚ್ಚು ಚರ್ಚೆಯ ಕೇಂದ್ರವಾಗಿದೆ. ಈಗಾಗಲೇ ಈ ಕುರಿತು ನ್ಯಾಯಾಲಯಗಳಲ್ಲಿ ವಿಚಾರಣೆಗಳು ಕೂಡ ನಡೆದಿವೆ.

ಏನಿದು ವಿವಾದ:

ಸಂಜೌಲಿ ಮಸೀದಿ ಹಿಮಾಚಲ ಪ್ರದೇಶದಲ್ಲಿ ರಾಜಕೀಯ ವಿವಾದವನ್ನು ಸೃಷ್ಟಿಸಿದೆ.

ಶಿಮ್ಲಾದಲ್ಲಿ ಎಲ್ಲರೂ ಸೇರಲು ದೇವಭೂಮಿ ಶಾತ್ರಿಯ ಸಂಘಟನೆಯ ಅಧ್ಯಕ್ಷ ರುಮಿತ್ ಸಿಂಗ್ ಠಾಕೂರ್ ಕರೆ ನೀಡಿದ್ದರು. ಆ ಬಳಿಕ ಪ್ರತಿಭಟನೆ ತೀವ್ರಗೊಂಡಿತ್ತು. ಮಸೀದಿ ಬಳಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಮಸೀದಿಯನ್ನು ಕೆಡವಲು ಒತ್ತಾಯಿಸಿದ್ದಾರೆ. ಈ ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ. ಮಸೀದಿಯ ನಾಲ್ಕೂ ಮಹಡಿಗಳು ಅಕ್ರಮವಾಗಿದೆ. 10 ವರ್ಷವಾದರೂ ಮಸೀದಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಅಕ್ರಮ ಮಸೀದಿಯನ್ನು ಕೆಡವಬೇಕು ಎಂದು ಪ್ರತಿಭಟನಾಕಾರರು ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಹಿಮಾಚಲ ಮುಖ್ಯಮಂತ್ರಿ ಸುಕ್ವಿಂದರ್ ಸುಖು ಅವರ ಅವರ ಹಿಂದೆಯೇ ನಿಂತು ಅನಿರುದ್ ಸಿಂಗ್ ಮಸೀದಿ ಕೆಡವಿ ಹಾಕುವ ಬೇಡಿಕೆಯಿಟ್ಟಿದ್ದಾರೆ. ಮಸೀದಿ ಇರುವ ಪ್ರದೇಶದಲ್ಲಿ ಮಹಿಳೆಯರಿಗೆ ನಡೆಯಲು ಕಷ್ಟವಾಗುತ್ತಿದೆ. ʼಲವ್ ಜಿಹಾದ್ʼ ನಡೆಯುತ್ತಿದೆ. ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಇದೆಲ್ಲದ್ದಕ್ಕೂ ನಾನೇ ಸಾಕ್ಷಿ ಎಂದೂ ಕಾಂಗ್ರೆಸ್ ಸಚಿವರು ಹೇಳಿಬಿಟ್ಟರು. ಆದ್ದರಿಂದ ಮಸೀದಿಯನ್ನು ಕೆಡವಬೇಕೆಂದು ಕಾಂಗ್ರೆಸ್ ಸಚಿವರು ಬಲವಾಗಿ ಆಗ್ರಹಿಸಿದರು. ಹಿಮಾಚಲ ಪ್ರದೇಶಕ್ಕೆ ಇತರ ರಾಜ್ಯಗಳಿಂದ ಬರುವ ಜನರ ಸರಿಯಾದ ಪರಿಶೀಲನೆ ನಡೆಯಬೇಕು ಎಂದೂ ಸಚಿವರು ಹೇಳಿದರು.

ಬೇರೆ ರಾಜ್ಯಗಳಿಂದ ಬರುವವರಲ್ಲಿ ಹಿಂದೂ ಮುಸ್ಲಿಂ ಎಂಬ ಭೇದವಿಲ್ಲ. ಯಾವುದೇ ಭದ್ರತಾ ಅಪಾಯಗಳನ್ನು ತಡೆಗಟ್ಟಲು ಹಿಮಾಚಲ ಪ್ರದೇಶಕ್ಕೆ ಬರುವವರ ವಿವರಗಳನ್ನು ನಾವು ಪರಿಶೀಲಿಸಬೇಕು. ಹಿಮಾಚಲ ಪ್ರದೇಶದಲ್ಲಿ ಬಾಂಗ್ಲಾದೇಶಿಗರು ಇದ್ದಾರೆ ಎಂದು ಸಚಿವರು ಹೇಳಿದ್ದಾರೆ.

ಅಲ್ಲದೇ ಪ್ರತಿಭಟನಾಕಾರರ ಮಧ್ಯೆ ಹೋಗಿ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಸಚಿವ ಭಾಷಣವನ್ನೂ ಮಾಡಿದ್ದಾರೆ.

ಸಿಎಂ ಸುಖವಿಂದರ್ ಸಿಂಗ್ ಸುಖು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಎಲ್ಲ ನಿವಾಸಿಗಳಿಗೂ ಸಮಾನ ಹಕ್ಕುಗಳಿವೆ ಮತ್ತು ನಮಗೆ ಎಲ್ಲ ಧರ್ಮಗಳ ಬಗ್ಗೆ ಗೌರವವಿದೆ ಎಂದು ಹೇಳಿದರು. ಶಾಂತಿಯುತ ಪ್ರತಿಭಟನೆಗಳಿಗೆ ಅನುಮತಿ ಇದೆ. ಆದರೆ ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

ಯಾವುದೇ ಅತಿಕ್ರಮಣದಾರರ ವಿರುದ್ಧ ನಿರ್ಲಕ್ಷ್ಯ ತೋರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.

“ಯಾರೂ ಕಾನೂನಿಗಿಂತ ಮೇಲಲ್ಲ. ಮುನ್ಸಿಪಲ್ ಕಾರ್ಪೊರೇಶನ್ ಅಥವಾ ಪೋಲೀಸ್ ಯಾವುದೇ ಕ್ರಮ ಕೈಗೊಂಡರೂ ಅದು ಕಾನೂನಿನ ಪ್ರಕಾರವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಈ ಬೆಳವಣಿಗೆ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಅಸದುದ್ದೀನ್ ಉವೈಸಿ, ರಾಹುಲ್ ಗಾಂಧಿಯವರ ʼಮೊಹಬ್ಬತ್ ಕಿ ದುಖಾನ್ʼ ಹೇಳಿಕೆಯನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರಾದ ಅನಿರುದ್ ಸಿಂಗ್ ಕಾನೂನುಬಾಹಿರವಾದದ್ದು ಕಾನೂನುಬಾಹಿರವೇ ಎಂದು ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್‌ ಸಚಿವರ ನಡೆಗೆ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News