ಟ್ರಂಪ್ ಎಚ್ಚರಿಕೆ ಹಿನ್ನೆಲೆ: ಡಾಲರ್ ಎದುರು ದಾಖಲೆ ಮಟ್ಟಕ್ಕೆ ಕುಸಿದ ರೂಪಾಯಿ
ಮುಂಬೈ: ಡಾಲರ್ ಎದುರು ರೂಪಾಯಿ ಸೋಮವಾರ ದಾಖಲೆ ಮಟ್ಟಕ್ಕೆ ಕುಸಿದಿದ್ದು, ಪ್ರತಿ ಡಾಲರ್ ಗೆ 84.73 ರೂಪಾಯಿ ಆಗಿದೆ. ಸೋಮವಾರ ರೂಪಾಯಿ ಮೌಲ್ಯ ಶೇಕಡ 0.2ರಷ್ಟು ಕುಸಿತ ಕಂಡಿದ್ದು, ಕಳೆದ ಜೂನ್ 4ರ ಬಳಿಕ ಇದು ಒಂದೇ ದಿನದಲ್ಲಿ ದಾಖಲಾದ ಅತಿದೊಡ್ಡ ಕುಸಿತವಾಗಿದೆ. ದಿನದ ಮಧ್ಯಂತರದಲ್ಲಿ 84.73 ರೂಪಾಯಿಗೆ ಕುಸಿದಿದ್ದ ಮೌಲ್ಯ ದಿನದ ಅಂತ್ಯಕ್ಕೆ 84.70ರಲ್ಲಿ ಕೊನೆಗೊಂಡಿತು. ಇದು ಶುಕ್ರವಾರದ ಮೌಲ್ಯಕ್ಕೆ ಹೋಲಿಸಿದರೆ 14 ಪೈಸೆಯಷ್ಟು ಕಡಿಮೆ.
ಎರಡನೇ ತ್ರೈಮಾಸಿಕದ ಪ್ರಗತಿಯ ಚಿತ್ರಣ ನಿರೀಕ್ಷೆಗಿಂತ ದುರ್ಬಲವಾಗಿ, ಡಾಲರ್ ಗೆ ನಾನ್ ಡೆಲಿವರೇಬಲ್ ಫಾರ್ವರ್ಡ್ ಮಾರುಕಟ್ಟೆಯಲ್ಲಿ ಪ್ರಬಲ ಬೇಡಿಕೆ ಕಂಡುಬಂದಿರುವುದು ಈ ಕುಸಿತಕ್ಕೆ ಕಾರಣ. ಆರ್ ಬಿಐ ಮಧ್ಯಪ್ರವೇಶದಿಂದಾಗಿ ಮತ್ತಷ್ಟು ನಷ್ಟವಾಗುವುದು ತಪ್ಪಿದೆ.
ರೂಪಾಯಿ ಮೌಲ್ಯ ಕುಸಿತಕ್ಕೆ ಜಾಗತಿಕ ಅಂಶಗಳು ಕೂಡಾ ಇತ್ತೀಚಿನ ದಿನಗಳಲ್ಲಿ ಕಾರಣವಾಗಿವೆ. ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು, ಡಾಲರ್ ಗೆ ಪರ್ಯಾಯವನ್ನು ಸೃಷ್ಟಿಸುವುದಾಗಿ ಬ್ರಿಕ್ಸ್ ದೇಶಗಳು ಪ್ರಸ್ತಾವ ಮುಂದಿಟ್ಟಿರುವ ವಿರುದ್ಧ ಎಚ್ಚರಿಕೆ ನೀಡಿ, ಶೇಕಡ 100ರ ಸುಂಕ ವಿಧಿಸುವುದಾಗಿ ಹೇಳಿದ್ದಾರೆ. ಈ ಭೌಗೋಳಿಕ-ರಾಜಕೀಯ ಬಿಕ್ಕಟ್ಟು, ಯೆನ್ ಅಪಮೌಲ್ಯಗೊಳಿಸುವ ಸಂಭಾವ್ಯ ಚೀನಿ ಪ್ರತಿರೋಧ ಮತ್ತಿತರ ಅಂಶಗಳು ಮಾರುಕಟ್ಟೆ ಅನಿಶ್ಚಿತತೆಗೆ ಕಾರಣವಾಗಿವೆ. ಇದರ ನಡುವೆಯೂ ಎಫ್ಐಐ ಹೊರಮುಖ ಹರಿವನ್ನು ವಿಶ್ಲೇಷಕರು ಅಂದಾಜಿಸಿದ್ದಾರೆ.
"ರೂಪಾಯಿ ಮೌಲ್ಯವನ್ನು ಇದೀಗ ಕೇವಲ ವಿಸ್ತೃತ ಆರ್ಥಿಕ ಅಂಶಗಳು ಮಾತ್ರ ನಿರ್ಧರಿಸುವುದಿಲ್ಲ.. ಇದು ರಾಜಕೀಯ-ಭೌಗೋಳಿಕ ಅಂಶಗಳನ್ನೂ ಒಳಗೊಂಡಿದೆ. ಜತೆಗೆ ವ್ಯಾಪಾರಕ್ಕೆ ಕುರಿತ ಅಮೆರಿಕದ ಹೊಸ ಆಡಳಿತದ ನಿಲುವನ್ನೂ ಅವಲಂಬಿಸಿದೆ. ಡಾಲರ್ಗೆ ಪರ್ಯಾಯ ವ್ಯವಸ್ಥೆಯಲ್ಲಿ ಬ್ರಿಕ್ಸ್ ಮಾಡಿಕೊಂಡರೆ ಶೇಕಡ 100ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದು, ಇದು ರೂಪಾಯಿ ಮೇಲೆ ಪರಿಣಾಮ ಬೀರಿದೆ" ಎಂದು ಡಿಬಿಎಸ್ ಬ್ಯಾಂಕ್ ನ ಖಜಾನೆ ಮುಖ್ಯಸ್ಥ ಆಶೀಶ್ ವೈದ್ಯ ಅಭಿಪ್ರಾಯಪಟ್ಟಿದ್ದಾರೆ.