ಸಂದೇಶಖಾಲಿಯ ಚಂಡಮಾರುತ ಬಂಗಾಳದಾದ್ಯಂತ ವ್ಯಾಪಿಸಿ ಟಿಎಂಸಿಯನ್ನು ನಿರ್ನಾಮಗೊಳಿಸಲಿದೆ: ಪ್ರಧಾನಿ ಮೋದಿ

Update: 2024-03-06 15:16 GMT

ನರೇಂದ್ರ ಮೋದಿ | Photo: PTI 

ಬಾರಾಸಾತ್ (ಪಶ್ಚಿಮ ಬಂ) : ಟಿಎಂಸಿ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಸಂದೇಶಖಾಲಿಯ ಚಂಡಮಾರುತವು ಪಶ್ಚಿಮ ಬಂಗಾಳದಾದ್ಯಂತ ಪ್ರತಿಧ್ವನಿಸಲಿದೆ ಮತ್ತು ‘ನಾರಿ ಶಕ್ತಿ’ಯು ಲೋಕಸಭಾ ಚುನಾವಣೆಯಲ್ಲಿ ಟಿಎಂಸಿಯನ್ನು ನಿರ್ನಾಮಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಹೇಳಿದರು.

ಉತ್ತರ 24 ಪರಗಣಗಳ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ಬಾರಾಸಾತ್ನಲ್ಲಿ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು,ಸಂದೇಶಖಾಲಿಯಲ್ಲಿ ಮಹಿಳೆಯರೊಂದಿಗೆ ನಡೆದಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದರು. ಸಂದೇಶಖಾಲಿ ಉತ್ತರ 24 ಪರಗಣಗಳ ಜಿಲ್ಲೆಯ ಭಾಗವಾಗಿದೆ.

ಅಮಾನತುಗೊಂಡಿರುವ ಟಿಎಂಸಿ ನಾಯಕ ಶಹಾಜಹಾನ್ ಶೇಖ್ ಮತ್ತು ಆತನ ಸಹವರ್ತಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂ ಕಬಳಿಕೆ ಆರೋಪಗಳನ್ನು ಎದುರಿಸುತ್ತಿದ್ದು,ಸಂದೇಶಖಾಲಿ ಅಶಾಂತಿಯಿಂದ ಕುದಿಯುತ್ತಿದೆ.

ಟಿಎಂಸಿ ಸರಕಾರವು ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸುವ ಬದಲು ತುಷ್ಟೀಕರಣ ರಾಜಕೀಯಕ್ಕೆ ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದ ಮೋದಿ, ಟಿಎಂಸಿ ನಾಯಕರು ವಿವಿಧ ಸ್ಥಳಗಳಲ್ಲಿ ಬಡ,ದಲಿತ ಮತ್ತು ಬುಡಕಟ್ಟು ಕುಟುಂಬಗಳ ಮಹಿಳೆಯರ ಮೇಲೆ ದೌರ್ಜನ್ಯಗಳನ್ನು ನಡೆಸುತ್ತಿದ್ದು, ಬಂಗಾಳದ ಮತ್ತು ದೇಶದ ಮಹಿಳೆಯರು ಸಿಟ್ಟಿಗೆದ್ದಿದ್ದಾರೆ. ಸಂದೇಶಖಾಲಿ ಚಂಡಮಾರುತವು ಬಂಗಾಳದ ಮೂಲೆಮೂಲೆಗೂ ತಲುಪಲಿದೆ ಮತ್ತು ಟಿಎಂಸಿ ನಿರ್ನಾಮಗೊಳ್ಳಲಿದೆ ಎಂದರು.

ಮಹಿಳಾ ಸಬಲೀಕರಣದ ಮಾರ್ಗದರ್ಶಿಯಾಗಿ ಪಶ್ಚಿಮ ಬಂಗಾಳದ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸಿದ ಪ್ರಧಾನಿ, ಟಿಎಂಸಿ ಆಡಳಿತದಲ್ಲಿ ರಾಜ್ಯವು ಮಹಿಳೆಯರ ವಿರುದ್ಧ ಘೋರ ದೌರ್ಜನ್ಯಗಳಿಗೆ ಸಾಕ್ಷಿಯಾಗಿದೆ ಎಂದು ವಿಷಾದಿಸಿದರು.

ಟಿಎಂಸಿ ಅಪರಾಧಿಗಳನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ನ್ಯಾಯಾಲಯದ ಮಧ್ಯಪ್ರವೇಶದ ಹೊರತಾಗಿಯೂ ಸಂದೇಶಖಾಲಿ ಘಟನೆಗಳಿಗೆ ಕಾರಣರಾದವರನ್ನು ಬಂಧಿಸುವುದನ್ನು ರಾಜ್ಯದ ಅಧಿಕಾರಿಗಳು ವಿರೋಧಿಸಿದ್ದರು. ಆದರೆ ಉಚ್ಛ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದಿಂದಾಗಿ ರಾಜ್ಯ ಸರಕಾರವು ಹಿನ್ನಡೆಯನ್ನು ಅನುಭವಿಸಿದೆ ಎಂದರು.

ಟಿಎಂಸಿಯು ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಹೇಳಿದ ಮೋದಿ, ಪ್ರತಿಪಕ್ಷಗಳ ಮೈತ್ರಿಕೂಟ ’ಇಂಡಿಯಾ’ವನ್ನು ತಿರಸ್ಕರಿಸುವಂತೆ ಮತ್ತು ಬಿಜೆಪಿಗೆ ಮತ ನೀಡುವಂತೆ ಮತದಾರರನ್ನು ಆಗ್ರಹಿಸಿದರು.

ಇದಕ್ಕೂ ಮುನ್ನ ಅವರು ಹೂಗ್ಲಿ ನದಿಯಡಿ ನಿರ್ಮಿಸಲಾಗಿರುವ ದೇಶದ ಮೊದಲ ನೀರಿನಡಿಯ ಸುರಂಗದ ಮೂಲಕ ಹಾದು ಹೋಗುವ ಕೋಲ್ಕತಾ ಮೆಟ್ರೋದ ಎಸ್ಪ್ಲನೇಡ್-ಹೌರಾ ಮೈದಾನ ಮಾರ್ಗವನ್ನು ಉದ್ಘಾಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News