ಸಂಜು ಸ್ಯಾಮ್ಸನ್‌ರ ಅಸ್ಥಿರ ನಿರ್ವಹಣೆ ಬಗ್ಗೆ ಕುಂಬ್ಳೆ ಕಳವಳ

Update: 2024-11-06 16:17 GMT

ಸಂಜು ಸ್ಯಾಮ್ಸನ್‌ | PC : PTI 

ಹೊಸದಿಲ್ಲಿ : ದಕ್ಷಿಣ ಆಫ್ರಿಕ ವಿರುದ್ಧದ ಮುಂಬರುವ ಟಿ20 ಸರಣಿಗೆ ಟೀಮ್ ಇಂಡಿಯಾ ಸಿದ್ಧತೆಗಳನ್ನು ನಡೆಸುತ್ತಿರುವಂತೆಯೇ, ಸಂಜು ಸ್ಯಾಮ್ಸನ್‌ರ ನಿರ್ವಹಣೆಯ ಸ್ಥಿರತೆ ಬಗ್ಗೆ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಕಳವಳ ವ್ಯಕ್ತಪಡಿಸಿದ್ದಾರೆ.

ಟಿ20 ಸರಣಿಯು ಶುಕ್ರವಾರ ಡರ್ಬನ್‌ನಲ್ಲಿ ಆರಂಭಗೊಳ್ಳಲಿದೆ.

ಸ್ಯಾಮ್ಸನ್ ಆಗಾಗ ಉತ್ತಮ ನಿರ್ವಹಣೆಗಳನ್ನು ನೀಡುತ್ತಾರೆ ಎಂದು ಕುಂಬ್ಳೆ ಅಭಿಪ್ರಾಯಪಟ್ಟರು. ಅವರು ಆಗೊಮ್ಮೆ ಈಗೊಮ್ಮೆ ಶ್ರೇಷ್ಠ ನಿರ್ವಹಣೆಗಳನ್ನು ನೀಡುತ್ತಾರೆ. ಆದರೆ ಸ್ಥಿರ ನಿರ್ವಹಣೆಯನ್ನು ನೀಡುವ ಸಾಮರ್ಥ್ಯವು ಗಮನಕ್ಕೆ ಬಂದಿಲ್ಲ ಎಂದು ಅವರು ಹೇಳಿದರು.

ದಕ್ಷಿಣ ಆಫ್ರಿಕ ಸರಣಿಗೆ ಮುನ್ನ ಜಿಯೋ ಸಿನೇಮಾದ ‘ಇನ್‌ಸೈಡರ್ಸ್ ಪ್ರಿವ್ಯೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಕುಂಬ್ಳೆ, ಇತ್ತೀಚೆಗೆ ಬಾಂಗ್ಲಾದೇಶದ ವಿರುದ್ಧ ಬಾರಿಸಿದ ಶತಕವು ಅವರ ಆತ್ಮವಿಶ್ವಾಸವನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಅಭಿಪ್ರಾಯಪಟ್ಟರು.

‘‘ತಂಡದಲ್ಲಿ ದೀರ್ಘಾವಧಿಗೆ ಸಂಜು ಸ್ಯಾಮ್ಸನ್‌ರನ್ನು ಉಳಿಸಿಕೊಳ್ಳುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಅವರು ಬಾರಿಸಿದ ಶತಕವು ಖಂಡಿತವಾಗಿಯೂ ಅವರಲ್ಲಿ ಅಗಾಧ ಆತ್ಮವಿಶ್ವಾಸವನ್ನು ತುಂಬಲಿದೆ. ಸಂಜು ಸ್ಯಾಮ್ಸನ್‌ರ ಸಾಮರ್ಥ್ಯದ ಬಗ್ಗೆ ನಮಗೆ ಗೊತ್ತಿದೆ. ಅವರು ಶ್ರೇಷ್ಠ ಆಟಗಾರ’’ ಎಂದು ಕುಂಬ್ಳೆ ಹೇಳಿರುವುದಾಗಿ ಜಿಯೋ ಸಿನೇಮಾದ ಪ್ರಕಟನೆಯೊಂದು ತಿಳಿಸಿದೆ.

ಸ್ಯಾಮ್ಸನ್‌ ರ ಟಿ20 ಕ್ರೀಡಾ ಬದುಕು 2015ರಲ್ಲಿ ಆರಂಭವಾಯಿತು. ಅವರು ತನ್ನ ಚೊಚ್ಚಲ ಪಂದ್ಯವನ್ನು ಝಿಂಬಾಬ್ವೆ ವಿರುದ್ಧ ಆಡಿದರು. ಅವರು ಈವರೆಗೆ 33 ಅಂತರ್‌ರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದು 144.52 ಸ್ಟ್ರೈಕ್ ರೇಟ್‌ನಲ್ಲಿ 594 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News