ಸರಪಂಚನ ಕೊಲೆ ಪ್ರಕರಣ | ಪೊಲೀಸರಿಗೆ ಶರಣಾದ ಆರೋಪಿ ವಾಲ್ಮೀಕಿ ಕರಾಡ್
ಪುಣೆ : ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಸ್ಸಾಜೊಗ್ನ ಸರಪಂಚ ಸಂತೋಷ್ ದೇಶಮುಖ್ ಅವರ ಹತ್ಯೆಗೆ ಸಂಬಂಧಿಸಿದ ಸುಲಿಗೆ ಪ್ರಕರಣದ ಆರೋಪಿ ವಾಲ್ಮೀಕಿ ಕರಾಡ್ ಮಂಗಳವಾರ ಪುಣೆ ಪೊಲೀಸರಿಗೆ ಶರಣಾಗಿದ್ದಾನೆ. ವಾಲ್ಮೀಕಿ ಕರಾಡ್, ಮಹಾರಾಷ್ಟ್ರದ ಹಾಲಿ ಎನ್ಸಿಪಿ ಸಚಿವ ಧನಂಜಯ ಮುಂಢೆ ಅವರ ಆಪ್ತ ಸಹಾಯಕ ವಾಲ್ಮೀಕಿ ಕಾರಡ್ ಅವರ ಆಪ್ತ ಸಹಾಯಕನೆಂದು ತಿಳಿದುಬಂದಿದೆ.
ತನ್ನ ಸಂಗಡಿಗರ ಜೊತೆ ಪುಣೆಯ ಪಾಶನ್ ಪ್ರದೇಶದಲ್ಲಿರುವ ಸಿಐಡಿ ಕಚೇರಿಗೆ ಆಗಮಿಸಿದ ಕರಾಡ್ ಪೊಲೀಸರಿಗೆ ಶರಣಾಗಿದ್ದಾನೆಂದು ಮೂಲಗಳು ತಿಳಿಸಿವೆ. ಅದಕ್ಕೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಆತ, ರಾಜಕೀಯ ದ್ವೇಷದಿಂದಾಗಿ ತನ್ನನ್ನು ಕೊಲೆ ಪ್ರಕರಣದ ಜೊತೆ ನಂಟು ಕಲ್ಪಿಸಲಾಗಿದೆಯೆಂದು ಆರೋಪಿಸಿದ್ದಾನೆ.
‘‘ನನ್ನ ವಿರುದ್ಧ ದಾಖಲಾಗಿರುವ ಸುಳ್ಳು ಪ್ರೃಕರಣಕ್ಕೆ ಸಂಬಂಧಿಸಿ ನಾನು ಪುಣೆಯ ಸಿಐಡಿ ಅಧಿಕಾರಿಗಳ ಮುಂದೆ ಶರಣಾಗತನಾಗಿದ್ದೇನೆ. ದೇಶಮುಖ್ ಅವರ ಕೊಲೆಯಲ್ಲಿ ಶಾಮೀಲಾದವರಿಗೆ ಶಿಕ್ಷೆಯಾಗಬೇಕು ಮತ್ತವರನ್ನು ಗಲ್ಲಿಗೇರಿಸಬೇಕು”, ಎಂದು ವಾಲ್ಮೀಕಿ ಕರಾಡ್ ಹೇಳಿದ್ದಾನೆ.
ಈ ಮಧ್ಯೆ ಕೊಲೆಯಾದ ಗ್ರಾಮಸರಪಂಚ ಸಂತೋಷ್ ದೇಶ್ಮುಖ್ ಅವರ ಸಹೋದರಿ ವೈಭವಿ ದೇಶಮುಖ್ ಅವರು ಕರಾಡ್ ಬಂಧನದಲ್ಲಿ ವಿಳಂಬವಾಗಿದ್ದನ್ನು ಪ್ರಶ್ನಿಸಿದ್ದಾರೆ. ಒಂದು ವೇಳೆ ಆರೋಪಿಯು ಶರಣಾಗತನಾಗಿದ್ದಾನೆ ಎಂದಾದರೆ, ಪೊಲೀಸರು ಈವರೆಗೆ ಏನು ಮಾಡುತ್ತಿದ್ದರು ’’ ಎಂದಾಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್ಲಾ ಆರೋಪಿಗಳ ದೂರವಾಣಿ ಕರೆ ದಾಖಲೆಗಳನ್ನು ಪೊಲೀಸರು ತಪಾಸಣೆ ನಡೆಸಬೇಕು ಹಾಗೂ ಅವರು ಯಾರೊಂದಿಗೆ ಸಂಪರ್ಕದಲ್ಲಿದ್ದರು ಎಂಬುದನ್ನು ಪತ್ತೆಹಚ್ಚಬೇಕು’’ ಎಂದವರು ಆಗ್ರಹಿಸಿದ್ದಾರೆ.
‘‘ಸಿಐಡಿಯು ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು. ಒಂದು ವೇಳೆ ಇದು ಹುಸಿ ಪ್ರಕರಣವೇ ಆಗಿದ್ದರೆ, ಹಾಗೆಂದು ಹೇಳಲು ಸೂತ್ರಧಾರಿಯಾದ ಕರಾಡ್ ಇಷ್ಟು ದಿನಗಳನ್ನು ಯಾಕೆ ತೆಗೆದುಕೊಂಡ’’ ಎಂದು ವೈಭವಿ ಪ್ರಶ್ನಿಸಿದ್ದಾರೆ.