ಮಣಿಪುರ ವಿದ್ಯಾರ್ಥಿಗಳನ್ನು ದೇಶದ ವಿವಿಧ ವಿವಿಗಳಿಗೆ ದಾಖಲಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Update: 2023-11-29 10:19 GMT

ಹೊಸದಿಲ್ಲಿ: ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯ ಕಾರಣಕ್ಕೆ ನಿರಾಶ‍್ರಿತರಾಗಿರುವ ವಿದ್ಯಾರ್ಥಿಗಳ ಗುಂಪೊಂದು, ತಮಗಾಗುವ ಒಂದು ಶೈಕ್ಷಣಿಕ ವರ್ಷದ ನಷ್ಟವನ್ನು ತಪ್ಪಿಸಲು ದೇಶಾದ್ಯಂತ ಇರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ನಮಗೆ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಸಲ್ಲಿಸಿರುವ ಅರ್ಜಿಯ ಕುರಿತು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಮಣಿಪುರ ಸರ್ಕಾರಕ್ಕೆ ಮಂಗಳವಾರ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಅರ್ಜಿದಾರರ ಪರ ವಕೀಲರಾದ ಮೀನಾಕ್ಷಿ ಅರೋರಾ ಅವರಿಗೆ ಈ ಸಂಬಂಧ ಮಣಿಪುರ ಹೈಕೋರ್ಟ್ ಅನ್ನು ಎದುರುಗೊಳ್ಳುವಂತೆ ಸೂಚಿಸಿತು.

ಆದರೆ, ಈ ಸೂಚನೆಗೆ ಪ್ರತಿಯಾಗಿ, ನಿರಾಶ್ರಿತ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳಲ್ಲಿ ವಾಸಿಸುತ್ತಿದ್ದು, ಅವರೆಲ್ಲ ಮಣಿಪುರ ಹೈಕೋರ್ಟ್ ಅನ್ನು ಎದುರುಗೊಳ್ಳುವುದು ಕಾರ್ಯಸಾಧ್ಯವಾಗುವುದಿಲ್ಲ. ಮಣಿಪುರ ವಿಶ್ವವಿದ್ಯಾಲಯ ಐಮಿ ಕಲ್ಯಾಣ ಸಂಘದ ಅಡಿಯಲ್ಲಿ ಒಂದುಗೂಡಿರುವ 284 ವಿದ್ಯಾರ್ಥಿಗಳ ಗುಂಪು ಈಗಾಗಲೇ ತಮ್ಮ ಆರು ತಿಂಗಳ ಅಮೂಲ್ಯ ಶೈಕ್ಷಣಿಕ ವರ್ಷವನ್ನು ನಷ್ಟ ಮಾಡಿಕೊಂಡಿದೆ ಎಂದು ವಕೀಲೆ ಮೀನಾಕ್ಷಿ ಅರೋರಾ ವಾದಿಸಿದರು.

ಕಾಶ‍್ಮೀರದ ವಲಸಿಗ ವಿದ್ಯಾರ್ಥಿಗಳು ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಲು ಇಂತಹ ವಿಸ್ತರಣೆಯನ್ನು ನೀಡಲಾಗಿದೆ ಎಂದೂ ಅವರು ವಾದಿಸಿದರು. ಇದಕ್ಕೆ ಪ್ರತಿಯಾಗಿ, ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸಂವಿಧಾನದ ವಿಧಿ 32ರ ಅಡಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ನೇಮಿಸಿರುವ ಸಮಿತಿಯನ್ನು ಪ್ರತಿವಾದಿಯನ್ನಾಗಿಸಬಾರದು ಎಂದು ಮನವಿ ಮಾಡಿದರು.

ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಜ್ ಮಿಶ್ರಾ ಅವರನ್ನೂ ಒಳಗೊಂಡಿದ್ದ ನ್ಯಾಯಪೀಠವು, ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಕಳವಳವನ್ನು ಪರಿಶೀಲಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಮಣಿಪುರ ಅಡ್ವೊಕೇಟ್ ಜನರಲ್ ಅವರಿಗೆ ಸೂಚಿಸಿ, ವಿಚಾರಣೆಯನ್ನು ಡಿಸೆಂಬರ್ 4ಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News