ಪ್ರಧಾನಿ ಮೋದಿಯ ಕೊಯಂಬತ್ತೂರು ರೋಡ್‌ ಶೋನಲ್ಲಿ ಶಾಲಾ ಮಕ್ಕಳು; ತನಿಖೆ ಆರಂಭ

Update: 2024-03-19 11:09 GMT

Photocredit: thehindu.com

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ 18ರಂದು ಕೊಯಂಬತ್ತೂರಿನಲ್ಲಿ ನಡೆಸಿದ ರೋಡ್‌ ಶೋನಲ್ಲಿ ಭಾಗವಹಿಸಲು ಶಾಲಾ ಮಕ್ಕಳನ್ನು ಕರೆತಂದ ವಿಚಾರದ ಕುರಿತು ತನಿಖೆಯನ್ನು ಆರಂಭಿಸಲಾಗಿದೆ ಎಂದು thehindu.com ವರದಿ ಮಾಡಿದೆ.

ಕೊಯಂಬತ್ತೂರು ಜಿಲ್ಲಾ ಶಿಕ್ಷಣಾಧಿಕಾರಿ ಇಂದು ಶ್ರೀ ಸಾಯಿ ಬಾಬಾ ವಿದ್ಯಾಲಯಂ ಅನುದಾನಿತ ಮಿಡ್ಲ್‌ ಸ್ಕೂಲ್‌ನ ಆಡಳಿತಕ್ಕೆ ಸೂಚನೆ ನೀಡಿ, ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿಯ ವಿರುದ್ಧ ಕಠಿಣ ಕ್ರಮಕೈಗೊಂಡು ಘಟನೆಯ ವಿಸ್ತೃತ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ.

ಪ್ರಧಾನಿಯ ರೋಡ್‌ ಶೋ ಸೋಮವಾರ ನಡೆದಾಗ ಹಲವಾರು ಶಾಲಾ ಮಕ್ಕಳು ಅದನ್ನು ವೀಕ್ಷಿಸಲು ಆಗಮಿಸಿದ್ದರು. ಇತರ ಕೆಲ 14 ವರ್ಷಕ್ಕಿಂತ ಕಿರಿಯ ಮಕ್ಕಳು ಹಿಂದು ದೇವರ ವೇಷ ಧರಿಸಿರುವುದು ಹಾಗೂ ಪಕ್ಷದ ಚಿಹ್ನೆ ಇರುವ ಕೇಸರಿ ಬಣ್ಣದ ಬಟ್ಟೆಗಳನ್ನು ಧರಿಸಿ ರೋಡ್‌ ಶೋ ಹಾದು ಹೋಗುವ ವಿವಿಧೆಡೆ ನಿಂತಿರುವುದು ಹಾಗೂ ಬಿಜೆಪಿ ಕಾರ್ಯಕರ್ತರು ಸಿದ್ಧಪಡಿಸಿದ ವೇದಿಕೆಗಳಲ್ಲಿ ಪ್ರದರ್ಶನ ನೀಡುತ್ತಿರುವುದು ಕಾಣಿಸಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

ಶಾಲಾ ಮುಖ್ಯೋಪಾಧ್ಯಾಯರು ಪ್ರತಿಕ್ರಿಯೆಗೆ ಲಭ್ಯರಿರದೇ ಇದ್ದರೂ ರೋಡ್‌ ಶೋನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಪ್ರಕಾರ ಅವರಿಗೆ ಕಾರ್ಯಕ್ರಮದ ಎರಡು ಗಂಟೆ ಮುಂಚಿತವಾಗಿ ಸಾಯಿ ಬಾಬಾ ಕಾಲನಿ ಜಂಕ್ಷನ್‌ನಲ್ಲಿರುವಂತೆ ಶಾಲಾಡಳಿತ ಸೂಚಿಸಿತ್ತು.

ಕೊಯಂಬತ್ತೂರು ಜಿಲ್ಲಾ ಕಲೆಕ್ಟರ್‌ ಕ್ರಾಂತಿ ಕುಮಾರ್‌ ಪಟಿ ಪ್ರತಿಕ್ರಿಯಿಸಿ ಈ ಕುರಿತು ಸಂಬಂಧಿತ ಇಲಾಖೆಗಳಿಂದ ವರದಿ ಕೇಳಲಾಗಿದೆ ಹಾಗೂ ತನಿಖೆಯ ಆಧಾರದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಸಹಾಯಕ ಚುನಾವಣಾಧಿಕಾರಿ ಪಿ ಸುರೇಶ್‌ ಪ್ರತಿಕ್ರಿಯಿಸಿ, ಈ ರೀತಿಯ ಪದ್ಧತಿಗಳು ನೀತಿ ಸಂಹಿತೆಯ ಉಲ್ಲಂಘನೆಯಾಗಿವೆ. ತನಿಖೆ ಪೂರ್ಣಗೊಂಡ ನಂತರ ವರದಿಗಳನ್ನು ಮುಂದಿನ ಕ್ರಮಕ್ಕಾಗಿ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News