ಶಾರೂಖ್ ಖಾನ್, ಕಾನ್ರಾಡ್ ಸಂಗ್ಮಾ ಅವರ ಶಿಕ್ಷಕ ಬ್ರದರ್ ಎರಿಕ್ ಡಿಸೋಝಾ ನಿಧನ

Update: 2024-10-14 16:29 GMT

ಬ್ರದರ್ ಎರಿಕ್ ಡಿಝೋಝಾ |  Credit: X/@SangmaConrad

ಪಣಜಿ : ಹಲವು ತಲೆಮಾರು ವಿದ್ಯಾರ್ಥಿಗಳ ಪ್ರಿಯ ಶಿಕ್ಷಕರಾಗಿದ್ದ, ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಶಿಕ್ಷಕರೂ ಆಗಿದ್ದ ಬ್ರದರ್ ಎರಿಕ್ ಡಿಝೋಝಾ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬ್ರದರ್ ಎರಿಕ್ ಡಿಸೋಝಾರ ನಿವಾಸಕ್ಕೆ ಒಮ್ಮೆ ಭೇಟಿ ನೀಡುವಂತೆ ಕಳೆದ ತಿಂಗಳು ನಟ ಶಾರೂಖ್ ಖಾನ್ ಗೆ ಕಾಂಗ್ರೆಸ್ ನಾಯಕರೊಬ್ಬರು ಕರೆ ನೀಡಿದ್ದರು. ಆದರೆ ಶಾರುಖ್ ಖಾನ್ ಭೇಟಿ ನೀಡಿರಲಿಲ್ಲ. ರವಿವಾರ ಮಧ್ಯಾಹ್ನ 1.20ರ ವೇಳೆಗೆ ವಾಸ್ಕೊದಲ್ಲಿನ ಚರ್ಚ್ ಸಂಕೀರ್ಣದಲ್ಲಿರುವ ರೆಗಿನಾ ಮುಂಡಿಯಲ್ಲಿರುವ ತಮ್ಮ ಸ್ವಗೃಹ ಶಾಂತಿ ನಿವಾಸದಲ್ಲಿ ಬ್ರದರ್ ಎರಿಕ್ ಡಿಸೋಝಾ ಕೊನೆಯುಸಿರೆಳೆದಿದ್ದಾರೆ.

ಪಾರ್ಕಿನ್ಸನ್ ರೋಗಕ್ಕೆ ತುತ್ತಾಗಿದ್ದ ಬ್ರದರ್ ಎರಿಕ್ ಡಿಸೋಝಾ ಹಾಸಿಗೆ ಹಿಡಿದಿದ್ದರು.

ದಿಲ್ಲಿಯ ಸೇಂಟ್ ಕೊಲಂಬಸ್ ಶಾಲೆ ಹಾಗೂ ಶಿಲ್ಲಾಂಗ್ ನ ಸೇಂಟ್ ಎಡ್ಮಂಡ್ಸ್ ಶಾಲೆಯಲ್ಲಿ ಹಲವಾರು ವಿದ್ಯಾರ್ಥಿಗಳ ಪಾಲಿಗೆ ಬ್ರದರ್ ಎರಿಕ್ ಡಿಸೋಝಾ ಪ್ರೀತಿಪಾತ್ರ ವ್ಯಕ್ತಿಯಾಗಿದ್ದರು. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಟ ಶಾರೂಖ್ ಖಾನ್ ಅವರ ವಿದ್ಯಾರ್ಥಿ ಜೀವನವನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಸೈಂಟ್ ಕೊಲಂಬಸ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಎರಿಕ್ ಅವರನ್ನು ಅಪರೂಪದ ಶಿಕ್ಷಕ ಎಂದು ಸ್ಮರಿಸಿದ್ದಾರೆ. ಅವರು ಶಿಕ್ಷಣ ಮತ್ತು ಮಾನವೀಯತೆಗೆ ಖ್ಯಾತರಾಗಿದ್ದರು ಎಂದು ನೆನಪಿಸಿದ್ದಾರೆ.

ಬ್ರದರ್ ಎರಿಕ್ ಡಿಸೋಝಾರ ಅಂತ್ಯಕ್ರಿಯೆಯನ್ನು ಅವರ ತವರಾದ ಶಿಲ್ಲಾಂಗ್ ನಲ್ಲಿ ನೆರವೇರಿಸಲು ಬುಧವಾರ ಮೇಘಾಲಯಕ್ಕೆ ಅವರ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುತ್ತದೆ ಎಂದು ಶಾಂತಿನಿವಾಸದ ಉದ್ಯೋಗಿಯಾದ ಜಾನ್ ವೀಗಸ್ ತಿಳಿಸಿದ್ದಾರೆ. ಬ್ರದರ್ ಎರಿಕ್ ಡಿಸೋಝಾರ ಪಾರ್ಥಿವ ಶರೀರವನ್ನು ಸದ್ಯ ಬ್ಯಾಂಬೊಲಿಮ್ ನ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿಡಲಾಗಿದೆ.

ಎರಿಕ್ ಡಿಸೋಝಾ ಅವರು ಅಸ್ಸಾಂ, ಮಂಗಳೂರು, ಮೇಘಾಲಯ, ನವದೆಹಲಿ ಮತ್ತು ಪಶ್ಚಿಮ ಬಂಗಾಳದ ಮಿಷನರಿ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಝರಿತಾ ಲೈತ್ ಫ್ಲಾಂಗ್ ಅವರು ಶಾರೂಖ್ ಖಾನ್ ಗೆ ನಿಮ್ಮ ಮಾಜಿ ಶಿಕ್ಷಕರನ್ನು ಒಮ್ಮೆ ಭೇಟಿ ಮಾಡಿ ಎಂದು ಕಳೆದ ಜೂನ್ ತಿಂಗಳಲ್ಲಿ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದಂದಿನಿಂದ ಬ್ರದರ್ ಎರಿಕ್ ಡಿಸೋಝಾ ಸುದ್ದಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News