ಭೀಮಾ ಕೋರೆಗಾಂವ್ ತ್ಯಾಗದ ಇತಿಹಾಸವನ್ನು ಅಳಿಸಲು ಕೋಮುವಾದಿ ಶಕ್ತಿಗಳು ಪ್ರಯತ್ನಿಸುತ್ತಿವೆ : ಶರದ್‌ ಪವಾರ್

Update: 2024-10-01 15:19 GMT

ಶರದ್‌ ಪವಾರ್ | PC : PTI  

ಪುಣೆ : ಮಹಾರಾಷ್ಟ್ರದ ಪುಣೆ ಜಿಲ್ಲೆಯ ಭೀಮಾ ಕೋರೆಗಾಂವ್ ಗ್ರಾಮದ ಇತಿಹಾಸವು ಜನರು ಮಾಡಿರುವ ತ್ಯಾಗಗಳ ಇತಿಹಾಸವಾಗಿದೆ. ಆದರೆ ಕೆಲವು ಕೋಮುವಾದಿ ಶಕ್ತಿಗಳು ಅದನ್ನು ಅಳಿಸಲು ಪ್ರಯತ್ನಿಸುತ್ತಿವೆ ಎಂದು ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್ ಹೇಳಿದ್ದಾರೆ.

ದಲಿತರನ್ನು ಒಳಗೊಂಡಿದ್ದ ಬ್ರಿಟಿಷ್ ಸೇನೆಯು ಪೇಶ್ವೆಗಳನ್ನು ಸೋಲಿಸಿದ್ದ 1818ರ ಭೀಮಾ ಕೋರೆಗಾಂವ್ ಯುದ್ಧದ ಸ್ಮರಣಾರ್ಥ 2017, ಡಿ.31ರಂದು ಪುಣೆಯಲ್ಲಿ ಎಲ್ಗಾರ್ ಪರಿಷದ್ ಸಮಾವೇಶವನ್ನು ಆಯೋಜಿಸಲಾಗಿತ್ತು. ಮರುದಿನ ಹಿಂಸಾಚಾರ ಭುಗಿಲೆದ್ದಿತ್ತು. ಮಹಾರಾಷ್ಟ್ರ ಸರಕಾರವು ಹಿಂಸಾಚಾರದ ಕುರಿತು ತನಿಖೆಗಾಗಿ ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಜೆ.ಎನ್.ಪಟೇಲ್ ಅಧ್ಯಕ್ಷತೆಯಲ್ಲಿ ಭೀಮಾ ಕೋರೆಗಾಂವ್ ವಿಚಾರಣಾ ಆಯೋಗವನ್ನು ಸ್ಥಾಪಿಸಿತ್ತು.

ಆಯೋಗದ ಎದುರು ಕೆಲವು ಸಾಕ್ಷಿಗಳನ್ನು ಪ್ರತಿನಿಧಿಸುತ್ತಿರುವ ವಕೀಲ ರಾಹುಲ್ ಮಾಖರೆ ಅವರು ಸೋಮವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಎನ್‌ಸಿಪಿ(ಎಸ್‌ಪಿ)ಗೆ ಸೇರ್ಪಡೆಗೊಂಡಿದ್ದು,ಈ ಸಂದರ್ಭದಲ್ಲಿ ಮಾತನಾಡಿದ ಪವಾರ್, ಹಿಂಸಾಚಾರವು ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರಕ್ಷುಬ್ಧತೆಗೆ ಕಾರಣವಾಗಿತ್ತು ಎಂದರು.

‘ಅದೊಂದು ದಿನ, ಆಯೋಗದ ಎದುರು ಹಾಜರಾಗುವಂತೆ ನನಗೂ ಸಮನ್ಸ್ ಬಂದಿತ್ತು. ವಿಚಾರಣೆ ಸಂದರ್ಭದಲ್ಲಿ ಕೆಲವು ವಿಷಯಗಳನ್ನು ಹೇಳುವಂತೆ ನನ್ನ ಮೇಲೆ ಒತ್ತಡ ಹೇರಲು ಕೆಲವರು ಪ್ರಯತ್ನಿಸಿದ್ದರು. ಭೀಮಾ ಕೋರೆಗಾಂವ್‌ನ ಇತಿಹಾಸವು ತಮ್ಮ ಪ್ರಾಣಗಳನ್ನು ತ್ಯಾಗ ಮಾಡಿದ್ದ ಜನರ ಇತಿಹಾಸವಾಗಿದೆ. ಆದರೆ ಕೆಲವು ಕೋಮುವಾದಿ ಶಕ್ತಿಗಳು ಈ ಇತಿಹಾಸವನ್ನು ಅಳಿಸಲು ಪ್ರಯತ್ನಿಸುತ್ತಿವೆ ’ ಎಂದು ಹೇಳಿದರು.

ಕೆಲವು ಯುವಕರು ಮುಂದಾಗಿ ಸಮಾಜದ ಎದುರು ಸತ್ಯವನ್ನು ಬಹಿರಂಗಗೊಳಿಸಿದ್ದರು. ಅವರ ಪೈಕಿ ಮಾಖರೆ ಒಬ್ಬರಾಗಿದ್ದರು ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಸಮಾಜಕ್ಕೆ ಬೆದರಿಕೆಯಾಗಿದ್ದಾರೆ ಮತ್ತು ಅವರ ಚಿಂತನೆಯು ಸಮಾನತೆಗೆ ಹಾನಿಕಾರಕವಾಗಿದೆ ಎಂದ ಪವಾರ್, ‘ಇಂದು ಆಡಳಿತಗಾರರು ಬಾಬಾಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನಕ್ಕೆ ಬೆದರಿಕೆಯೊಡ್ಡಲು ಪ್ರಯತ್ನಿಸುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಗಳಲ್ಲಿ ತಮ್ಮ ಪಕ್ಷಕ್ಕೆ 400 ಸ್ಥಾನಗಳು ಲಭಿಸಿದರೆ ಸಂವಿಧಾನವನ್ನು ಬದಲಿಸುತ್ತೇವೆ ಎಂದು ಇದೇ ಬಿಜೆಪಿಯ ನಾಯಕರು ಹೇಳಿದ್ದರು’ ಎಂದು ಹೇಳಿದರು.

ಸಂವಿಧಾನದಿಂದಾಗಿ ಭಾರತವು ನೆರೆಯ ದೇಶಗಳನ್ನು ಕಾಡುತ್ತಿರುವ ಅಸ್ಥಿರತೆಯಿಂದ ಮುಕ್ತವಾಗಿದೆ ಮತ್ತು ಇದರ ಎಲ್ಲ ಹೆಗ್ಗಳಿಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಪವಾರ್ ಪ್ರತಿಪಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News