ನಾಯಿ ಮೇಲೆ ದಾಳಿ ನಡೆಸುವಂಥ ವರ್ತನೆ ಮುಜುಗರಕಾರಿ : ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಶಿ ತರೂರ್
ಹೊಸದಿಲ್ಲಿ : ಭಾರತ ಸರಕಾರವನ್ನು ಅಸ್ಥಿರಗೊಳಿಸಲು ಅಮೆರಿಕದ ಆಂತರಿಕ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂಬ ಆರೋಪಗಳನ್ನು ಅಮೆರಿಕ ಅಲ್ಲಗಳೆದ ಬೆನ್ನಿಗೇ, ನಾಯಿ ಮೇಲೆ ದಾಳಿ ನಡೆಸುವಂಥ ವರ್ತನೆ ಭಾರತದ ಪಾಲಿಗೆ ಮುಜುಗರಕಾರಿಯಾಗಿದೆ ಎಂದು ರವಿವಾರ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಶಿ ತರೂರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿಯನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಯ ಹಿಂದಿರುವ ಅಮೆರಿಕ ರಾಜ್ಯ ಇಲಾಖೆಯಿಂದ ಹಣಕಾಸಿನ ನೆರವು ಪಡೆದಿರುವ ಸಂಘಟನೆಗಳು ಹಾಗೂ ಅಮೆರಿಕದಲ್ಲಿನ ಆಂತರಿಕ ಶಕ್ತಿಗಳು, ಭಾರತ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ನಡೆಸುತ್ತಿವೆ ಎಂಬ ಬಿಜೆಪಿಯ ಆರೋಪವನ್ನು ರವಿವಾರ ಅಮೆರಿಕ ತಳ್ಳಿ ಹಾಕಿದೆ.
ಬಿಜೆಪಿಯ ಆರೋಪಗಳು ನಿರಾಶಾದಾಯಕ ಎಂದು ಬಣ್ಣಿಸಿರುವ ಅಮೆರಿಕ ರಾಜತಾಂತ್ರಿಕ ಕಚೇರಿಯ ವಕ್ತಾರರು, ವಿಶ್ವದಾದ್ಯಂತ ಮಾಧ್ಯಮ ಸ್ವಾತಂತ್ರ್ಯದಲ್ಲಿ ಅಮೆರಿಕ ಸರಕಾರ ಮುಂಚೂಣಿಯಲ್ಲಿದೆ ಎಂದು ಹೇಳಿದ್ದಾರೆ.
ಭಾರತದ ವರ್ಚಸ್ಸಿಗೆ ಧಕ್ಕೆ ತರಲು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ(ಒಸಿಸಿಆರ್ಪಿ)ಯ ಮಾಧ್ಯಮ ಪೋರ್ಟಲ್ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೊಂದಿಗೆ ಅಮೆರಿಕದ ಆಂತರಿಕ ಶಕ್ತಿಗಳು ಕೈಜೋಡಿಸಿವೆ ಎಂದು ಗುರುವಾರ ಬಿಜೆಪಿ ಆರೋಪಿಸಿತ್ತು.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಶಶಿ ತರೂರ್, “ಬಿಜೆಪಿಗೆ ಪ್ರಜಾಪ್ರಭುತ್ವವಾಗಲಿ ಅಥವಾ ರಾಜತಾಂತ್ರಿಕತೆಯಾಗಲಿ ಅರ್ಥವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಅವರು ಕುರುಡು ಚಿಲ್ಲರೆ ರಾಜಕೀಯದಲ್ಲಿ ಎಷ್ಟು ಮುಳುಗಿದ್ದಾರೆಂದರೆ, ಅವರು ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹಾಗೂ ಸ್ವತಂತ್ರ ನಾಗರಿಕ ಸಮಾಜ ಸಂಘಟನೆಗಳ ಮೌಲ್ಯವನ್ನೇ ಮರೆತಿದ್ದಾರೆ ಹಾಗೂ ಪ್ರಮುಖ ವಿದೇಶಗಳೊಂದಿಗೆ ಉತ್ತಮ ಸಂಬಂಧವಿಟ್ಟುಕೊಳ್ಳಲು ಆಡಳಿತಾರೂಢ ಪಕ್ಷಕ್ಕೆ ಅವು ಅನಿವಾರ್ಯವಾಗಿದೆ” ಎಂದು ಹೇಳಿದ್ದಾರೆ.