ಮಹಿಳೆಯರ ಕಲ್ಯಾಣಕ್ಕಾಗಿರುವ ಕಠಿಣ ಕಾನೂನುಗಳು ಗಂಡಂದಿರಿಗೆ ಬೆದರಿಕೆ, ಸುಲಿಗೆಗೆ ದುರ್ಬಳಕೆಯಾಗಬಾರದು: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಮಹಿಳೆಯರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿರುವ ಕಾನೂನುಗಳನ್ನು ಗಂಡಂದಿರಿಗೆ ಕಿರುಕುಳ, ಬೆದರಿಕೆ ಅಥವಾ ಸುಲಿಗೆಯ ಸಾಧನಗಳನ್ನಾಗಿ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸವೋಚ್ಚ ನ್ಯಾಯಾಲಯವು ಗುರುವಾರ ಒತ್ತಿ ಹೇಳಿದೆ. ಜೀವನಾಂಶದ ಉದ್ದೇಶವು ಮಾಜಿ ಸಂಗಾತಿಯ ಆರ್ಥಿಕ ಸ್ಥಿತಿಯನ್ನು ಸಮೀಕರಿಸುವುದಲ್ಲ, ಬದಲು ಅವಲಂಬಿತ ಮಹಿಳೆಗೆ ಯೋಗ್ಯವಾದ ಜೀವನ ಮಟ್ಟವನ್ನು ಒದಗಿಸುವುದಾಗಿದೆ ಎಂದು ಅದು ಹೇಳಿದೆ.
ಮಾಜಿ ಪತಿಯು ತನ್ನ ಪ್ರಸ್ತುತ ಹಣಕಾಸು ಸ್ಥಿತಿಯ ಆಧಾರದಲ್ಲಿ ತನ್ನ ಮಾಜಿ ಪತ್ನಿಯನ್ನು ಅನಿರ್ದಿಷ್ಟವಾಗಿ ಬೆಂಬಲಿಸುವ ಬಾಧ್ಯತೆಯನ್ನು ಹೊರಿಸಲು ಸಾಧ್ಯವಿಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದ ನ್ಯಾಯಾಲಯವು, ಹಿಂದೂ ವಿವಾಹವನ್ನು ಕುಟುಂಬಕ್ಕೆ ಅಡಿಪಾಯವಾದ ಪವಿತ್ರ ಸಂಬಂಧ ಎಂದು ಪರಿಗಣಿಸಲಾಗಿದೆಯೇ ಹೊರತು ‘ವಾಣಿಜ್ಯ ಉದ್ಯಮ’ವನ್ನಾಗಿ ಅಲ್ಲ ಎಂದು ಹೇಳಿತು.
ತಮಗಾಗಿ ಇರುವ ಕಾನೂನಿನ ಕಠಿಣ ನಿಬಂಧನೆಗಳು ತಮ್ಮ ಕಲ್ಯಾಣಕ್ಕಾಗಿಯೇ ಇವೆ,ಅವು ತಮ್ಮ ಗಂಡಂದಿರನ್ನು ಶಿಕ್ಷಿಸುವ,ಬೆದರಿಸುವ,ಅವರ ಮೇಲೆ ಅಧಿಕಾರ ಸಾಧಿಸುವ ಅಥವಾ ಸುಲಿಗೆ ಮಾಡುವ ಸಾಧನಗಳಲ್ಲ ಎನ್ನುವುದರ ಬಗ್ಗೆ ಮಹಿಳೆಯರು ಜಾಗರೂಕರಾಗಿರುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು ಹೇಳಿತು.
ದಂಪತಿಯ ನಡುವೆ ಮುರಿದು ಬಿದ್ದಿರುವ ಸಂಬಂಧವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎನ್ನುವುದನ್ನು ಕಂಡುಕೊಂಡ ಸರ್ವೋಚ್ಚ ನ್ಯಾಯಾಲಯವು ಅವರ ವಿಚ್ಛೇದನಕ್ಕೆ ಹಸಿರು ನಿಶಾನೆ ತೋರಿಸಿದ ಸಂದರ್ಭದಲ್ಲಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ವಿಚ್ಛೇದಿತ ಪತ್ನಿಗೆ ಒಂದು ತಿಂಗಳೊಳಗೆ ಸಂಪೂರ್ಣ ಮತ್ತು ಅಂತಿಮ ಪರಿಹಾರವಾಗಿ 12 ಕೋಟಿ ರೂ.ಗಳನ್ನು ಶಾಶ್ವತ ಜೀವನಾಂಶವಾಗಿ ಪಾವತಿಸುವಂತೆ ಸರ್ವೋಚ್ಚ ನ್ಯಾಯಾಲಯವು ಪತಿಗೆ ಆದೇಶಿಸಿತು.
ತನ್ನ ಪರಿತ್ಯಕ್ತ ಪತಿಯು 5,000 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದು, ಅಮೆರಿಕ ಮತ್ತು ಭಾರತದಲ್ಲಿ ಹಲವಾರು ಉದ್ಯಮಗಳು ಮತ್ತು ಆಸ್ತಿಗಳಿವೆ. ತನ್ನ ಮೊದಲ ಪತ್ನಿಯಿಂದ ಪ್ರತ್ಯೇಕಗೊಂಡ ಬಳಿಕ ಆಕೆಗೆ ವರ್ಜೀನಿಯಾದಲ್ಲಿ ಮನೆ ಮತ್ತು ಕನಿಷ್ಠ 500 ಕೋಟಿ ರೂ.ಗಳನ್ನು ಪಾವತಿಸಿದ್ದ ಎಂದು ಪತ್ನಿ ಪ್ರತಿಪಾದಿಸಿದ್ದಳು.
ತಾನು ಇಲ್ಲಿ ಪ್ರತಿವಾದಿ ಪತಿಯ ಆದಾಯವನ್ನು ಮಾತ್ರ ಪರಿಗಣಿಸದೆ ಅರ್ಜಿದಾರ ಪತ್ನಿಯ ಆದಾಯ, ಆಕೆಯ ನ್ಯಾಯಯುತ ಅಗತ್ಯಗಳು, ವಸತಿ ಹಕ್ಕುಗಳು ಇತ್ಯಾದಿಗಳಂತಹ ಇತರ ಅಂಶಗಳನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ‘ಪ್ರತಿವಾದಿಯ ಸಂಪತ್ತಿಗೆ ಅನುಗುಣವಾಗಿ ನಿರ್ವಹಣೆ ವೆಚ್ಚ ಅಥವಾ ಜೀವನಾಂಶವನ್ನು ಕೋರುವ ಪ್ರವೃತ್ತಿಯ ಬಗ್ಗೆ ನಾವು ಗಂಭೀರ ಆಕ್ಷೇಪಗಳನ್ನು ಹೊಂದಿದ್ದೇವೆ. ನಿರ್ವಹಣೆ ವೆಚ್ಚ ಅಥವಾ ಜೀವನಾಂಶವನ್ನು ಕೋರಿ ಸಲ್ಲಿಸಲಾಗುವ ಅರ್ಜಿಗಳಲ್ಲಿ ತಮ್ಮ ಸಂಗಾತಿಯ ಆಸ್ತಿಗಳು,ಸ್ಥಿತಿ ಮತ್ತು ಆದಾಯವನ್ನು ಪ್ರಮುಖವಾಗಿ ಬಿಂಬಿಸುವುದನ್ನು ಮತ್ತು ಸಂಗಾತಿಯ ಸಂಪತ್ತಿಗೆ ಅನುಗುಣವಾಗಿ ಮೊತ್ತಕ್ಕಾಗಿ ಬೇಡಿಕೆಯಿಡುವುದನ್ನು ನಾವು ಆಗಾಗ್ಗೆ ನೋಡಿದ್ದೇವೆ ’ ಎಂದು ಹೇಳಿತು.
ವಿಚ್ಛೇದನದ ಬಳಿಕ ಕೆಲವು ದುರದೃಷ್ಟಕರ ಬೆಳವಣಿಗೆಗಳಿಂದಾಗಿ ಪತಿಯು ದಿವಾಳಿಯಾದಾಗ ಆತನ ಆಗಿನ ಸಂಪತ್ತಿಗೆ ಅನುಗುಣವಾಗಿ ಜೀವನಾಂಶವನ್ನು ಪಡೆಯಲು ಪತ್ನಿಯು ಸಿದ್ಧಳಾಗುತ್ತಾಳೆಯೇ ಎಂದು ನ್ಯಾಯಾಲಯವು ಪ್ರಶ್ನಿಸಿತು.
ಪತ್ನಿ ಮತ್ತು ಆಕೆಯ ಕುಟುಂಬವು ಗಂಭೀರ ಅಪರಾಧಗಳ ಕ್ರಿಮಿನಲ್ ದೂರುಗಳನ್ನು ಚೌಕಾಶಿಯ ಸಾಧನವಾಗಿ,ಪ್ರಮುಖವಾಗಿ ತಮ್ಮ ಹೆಚ್ಚಿನ ವಿತ್ತೀಯ ಬೇಡಿಕೆಗಳನ್ನು ಪೂರೈಸುವಂತೆ ಪತಿಯ ಮೇಲೆ ಒತ್ತಡ ಹೇರಲು ದುರ್ಬಳಕೆ ಮಾಡಿಕೊಂಡ ಹಲವಾರು ನಿದರ್ಶನಗಳನ್ನು ನ್ಯಾಯಾಲಯವು ಗಮನಕ್ಕೆ ತೆಗೆದುಕೊಂಡಿತು.
ಪರಿತ್ಯಕ್ತ ಪತಿಯ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣಗಳನ್ನೂ ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತು.