ಹೇಮಾ ಸಮಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ : ಕೇರಳ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Update: 2024-08-22 16:27 GMT

PC : indianexpress.com

ತಿರುವನಂತಪುರ : ಮಲೆಯಾಳಂ ಚಿತ್ರರಂಗದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯದ ಕುರಿತ ಹೇಮಾ ಸಮಿತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೇರಳ ಉಚ್ಛ ನ್ಯಾಯಾಲಯ ಗುರುವಾರ ಕೇರಳ ಸರ್ಕಾರಕ್ಕೆ ಸೂಚಿಸಿದೆ.

ತಿರುವನಂತಪುರದ ನಿವಾಸಿ ನವಾಸ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್)ಯನ್ನು ಉಸ್ತುವಾರಿ ಮುಖ್ಯ ನ್ಯಾಯಮೂರ್ತಿ ಎ. ಮುಹಮ್ಮದ್ ಮುಸ್ತಾಕ್ ಹಾಗೂ ನ್ಯಾಯಮೂರ್ತಿ ಎಸ್. ಮನು ಅವರನ್ನು ಒಳಗೊಂಡ ವಿಭಾಗೀಯ ಪೀಠ ಪರಿಗಣಿಸಿತು. ಅಲ್ಲದೆ ಪ್ರತಿ ಅಫಿಡಾವಿಟ್ ಸಲ್ಲಿಸುವಂತೆ ಸರಕಾರಕ್ಕೆ ಸೂಚಿಸಿತು.

ಹೇಮಾ ಸಮಿತಿ ಸಲ್ಲಿಸಿದ ವರದಿ ಆಧರಿಸಿ ಮುಂದೆ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ನ್ಯಾಯಾಲಯ ಸರಕಾರವನ್ನು ಪ್ರಶ್ನಿಸಿತು. ಸರಕಾರದ ಪರವಾಗಿ ಹಾಜರಾಗಿದ್ದ ವಕೀಲರು, ಯಾರಾದರೂ ದೂರು ನೀಡದ ಹೊರತು ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.

ಚಿತ್ರರಂಗದಲ್ಲಿ ಮಹಿಳೆಯರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಲು ಹಾಗೂ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿತ್ತು. ಆದರೆ, ಗೌಪ್ಯತೆಯ ಖಾತರಿಯ ಆಧಾರದಲ್ಲಿ ಸಮಿತಿ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದರಿಂದ ಪ್ರಕರಣ ದಾಖಲಿಸಲು ಮಿತಿಗಳು ಇವೆ ಎಂದು ಸರಕಾರ ತಿಳಿಸಿತು.

ಮೂಲ ವರದಿಯನ್ನು ಪ್ರಕಟಿಸುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆ ಆಗ್ರಹಿಸಿದೆ. ಅಲ್ಲದೆ, ವರದಿಯಲ್ಲಿ ಉಲ್ಲೇಖಿಸಿರುವ ಲೈಂಗಿಕ ಅಪರಾಧದ ಆರೋಪಕ್ಕೆ ಸಂಬಂಧಿಸಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ಆರಂಭಿಸಲು ರಾಜ್ಯ ಸರಕಾರಕ್ಕೆ ನಿರ್ದೇಶಿಸುವಂತೆ ಉಚ್ಛ ನ್ಯಾಯಾಲಯಕ್ಕೆ ಮನವಿ ಮಾಡಿದೆ.

2017ರಲ್ಲಿ ನಟ ದಿಲೀಪ್ ಭಾಗಿಯಾಗಿರುವ ನಟಿಗೆ ಕಿರುಕುಳ ಪ್ರಕರಣದ ಬಳಿಕ ಮಲೆಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಹಾಗೂ ಲಿಂಗ ಅಸಮಾನತೆಯ ವಿಷಯಗಳನ್ನು ಅಧ್ಯಯನ ಮಾಡಲು ಜಸ್ಟಿಸ್ ಕೆ. ಹೇಮಾ ಸಮಿತಿಯನ್ನು ರೂಪಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News