ಚುನಾವಣೆಯಲ್ಲಿ ಗೆದ್ದರೆ ʼಸುಲ್ತಾನ್ ಬತ್ತೇರಿʼಯನ್ನು ʼಗಣಪತಿವಟ್ಟಂʼ ಎಂದು ಮರು ನಾಮಕರಣ: ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್

Update: 2024-04-11 12:22 GMT

ಕೆ. ಸುರೇಂದ್ರನ್ | PC : PTI 

ತಿರುವನಂತಪುರಂ: ಒಂದು ವೇಳೆ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ನನ್ನ ಪ್ರಥಮ ಆದ್ಯತೆ ಸುಲ್ತಾನ್ ಬತ್ತೇರಿಯನ್ನು ಗಣಪತಿವಟ್ಟಂ ಎಂದು ಮರು ನಾಮಕರಣ ಮಾಡುವುದು ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೇರಳ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಘೋಷಿಸಿದ್ದಾರೆ.

ಟಿವಿ ವಾಹಿನಿಯೊಂದರೊಂದಿಗೆ ಮಾತನಾಡಿದ ಕೆ.ಸುರೇಂದ್ರನ್, “ಸುಲ್ತಾನ್ ಬತ್ತೇರಿ ಹೆಸರನ್ನು ಬದಲಿಸುವುದು ಅನಿವಾರ್ಯವಾಗಿದೆ. ಟಿಪ್ಪು ಸುಲ್ತಾನ್ ನ ಆಕ್ರಮಣದೊಂದಿಗೆ ಸುಲ್ತಾನ್ ಬತ್ತೇರಿ ಹೆಸರು ಥಳಕು ಹಾಕಿಕೊಂಡಿದೆ. ಈ ಸ್ಥಳದ ಹೆಸರು ಗಣಪತಿವಟ್ಟಂ. ಈ ಸ್ಥಳದ ಹೆಸರು ಕ್ರಿಮಿನಲ್ ಒಬ್ಬನ ಹೆಸರಿನಲ್ಲಿರುವುದು ಕಾಂಗ್ರೆಸ್ ಹಾಗೂ ಸಿಪಿಐ(ಎಂ) ಪಕ್ಷಗಳಿಗೆ ಬೇಕಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

“ಸುಲ್ತಾನ್ ಬತ್ತೇರಿಯನ್ನು ಗಣಪತಿವಟ್ಟಂ ಎಂದು ಮರು ನಾಮಕರಣ ಮಾಡಲೇಬೇಕಿದೆ. ಇದು ಹಿಂದೂಗಳು ಹಾಗೂ ಕ್ರಿಶ್ಚಿಯನ್ನರ ಮಾರಣಹೋಮ ಮಾಡಿದ ಟಿಪ್ಪು ಸುಲ್ತಾನ್ ನೆಲವಲ್ಲ” ಎಂದು ಅವರು ಹೇಳಿದರು.

ವಯನಾಡ್ ಲೋಕಸಭಾ ಕ್ಷೇತ್ರದಲ್ಲಿರುವ ಮೂರು ಮಹಾನಗರ ಪಾಲಿಕೆಗಳ ಪೈಕಿ ಸುಲ್ತಾನ್ ಬತ್ತೇರಿ ಕೂಡಾ ಒಂದಾಗಿದೆ. ಈ ಪಟ್ಟಣವು ಟಿಪ್ಪು ಸುಲ್ತಾನ್ ಶಸ್ತ್ರಾಸ್ತ್ರ ಕೋಠಿಯಾಗಿ ಬಳಕೆಯಾಗುತ್ತಿದ್ದುದರಿಂದ, ಈ ಸ್ಥಳವು ಬ್ರಿಟಿಷರ ದಾಖಲೆಗಳಲ್ಲಿ ‘ಸುಲ್ತಾನ್ ಬ್ಯಾಟರಿ’ ಎಂದೇ ಹೆಸರಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ವಯನಾಡ್ ನ ಕಲ್ಪೆಟ್ಟ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಸಿದ್ದಿಕಿ, “ಸುರೇಂದ್ರನ್ ವಯನಾಡ್ ನಿಂದ ಗೆಲ್ಲದೇ ಇರುವುದರಿಂದ ಅವರು ಏನನ್ನಾದರೂ ಹೇಳಲು ಸ್ವತಂತ್ರರಾಗಿದ್ದಾರೆ. ಇದು ಕೇವಲ ಗಮನ ಸೆಳೆಯಲು ನೀಡಲಾಗಿರುವ ಹೇಳಿಕೆ” ಎಂದು ವ್ಯಂಗ್ಯವಾಡಿದ್ದಾರೆ.

ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಸಿಪಿಐನ ಅನ್ನೀ ರಾಜಾ ವಿರುದ್ಧ ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ. ಎಪ್ರಿಲ್ 26ರಂದು ಕೇರಳದಲ್ಲಿ ಒಂದೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News