ಫೆಲೆಸ್ತೀನ್‌ ಗೆ ಬೆಂಬಲ | ಅಮೆರಿಕ ನೀಡುವ ‘ರೂಮ್ ಟು ರೀಡ್ ಯಂಗ್ ಆಥರ್ ಅವಾರ್ಡ್’ ತಿರಸ್ಕರಿಸಿದ ಆದಿವಾಸಿ ಕವಿ ಜೆಸಿಂತಾ ಕೆರ್ಕಟ್ಟಾ

Update: 2024-10-01 15:43 GMT

ಜೆಸಿಂತಾ ಕೆರ್ಕಟ್ಟಾ | PC : FACEBOOK

ಹೊಸದಿಲ್ಲಿ : ‘ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಷನಲ್ ಡೆವಲಪ್‌ಮೆಂಟ್’ ಹಾಗೂ ‘ರೂಮ್ ಟು ರೀಡ್ ಇಂಡಿಯಾ ಟ್ರಸ್ಟ್’ನ 2024ನೇ ಸಾಲಿನ ‘ರೂಮ್ ಟು ರೀಡ್ ಯಂಗ್ ಆಥರ್ ಅವಾರ್ಡ್’ ಅನ್ನು ಆದಿವಾಸಿ ಕವಿ ಹಾಗೂ ಪತ್ರಕರ್ತೆ ಜೆಸಿಂತಾ ಕೆರ್ಕಟ್ಟಾ ಅವರು ತಿರಸ್ಕರಿಸಿದ್ದಾರೆ.

ಗಾಝಾದಲ್ಲಿ ಇಸ್ರೇಲ್ ಯುದ್ಧದ ನಡುವೆ ಫೆಲೆಸ್ತೀನ್ ಅನ್ನು ಬೆಂಬಲಿಸಿ ಕೆರ್ಕಟ್ಟಾ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.

ಕೆರ್ಕಟ್ಟಾ ಅವರ ಮಕ್ಕಳ ಕವಿತೆಯ ಸಂಕಲನ ‘ಜಿರ್‌ಹುಲ್’ ಈ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ದಿಲ್ಲಿಯಲ್ಲಿ ಅಕ್ಟೋಬರ್ 7ರಂದು ಆಯೋಜಿಸಲಾಗಿದೆ.

‘‘ಮಕ್ಕಳ ಶಿಕ್ಷಣಕ್ಕಾಗಿ ವಾಯು ಯಾನ ಕಂಪೆನಿ ಬೋಯಿಂಗ್‌ನೊಂದಿಗೆ ಕೂಡ ರೂಮ್ ಟು ರೀಡ್ ಇಂಡಿಯಾ ಟ್ರಸ್ಟ್ ಸಂಬಂಧ ಹೊಂದಿದೆ. ಶಸ್ತ್ರಾಸ್ತ್ರ ವ್ಯಾಪಾರ ಹಾಗೂ ಮಕ್ಕಳ ಪಾಲನೆ ಏಕ ಕಾಲದಲ್ಲಿ ಮುಂದುವರಿಯಲು ಹೇಗೆ ಸಾಧ್ಯ. ಯಾಕೆಂದರೆ, ಅದೇ ಶಸ್ತ್ರಾಸ್ತ್ರಗಳಿಂದ ಮಕ್ಕಳ ಜಗತ್ತು ನಾಶವಾಗುತ್ತಿದೆ’’ ಎಂದು ಕೆರ್ಕಟ್ಟಾ ಹೇಳಿದ್ದಾರೆ.

‘‘ಮಕ್ಕಳಿಗಾಗಿ ಉತ್ತಮ ಜಗತ್ತನ್ನು ನಿರ್ಮಿಸುವಲ್ಲಿ ಹಿರಿಯರು ಮಹತ್ವದ ಪಾತ್ರವನ್ನು ನಿರ್ವಹಿಸದೇ ಇರುವಾಗ, ಈ ಪ್ರಶಸ್ತಿ ನಿಜವಾಗಿಯೂ ಯಾವ ಮೌಲ್ಯವನ್ನು ಹೊಂದಿದೆ ?’’ ಎಂದು ಕೆರ್ಕಟ್ಟಾ ಪ್ರಶ್ನಿಸಿದ್ದಾರೆ.

ವಾಯು ಯಾನ ಕಂಪೆನಿ ಬೋಯಿಂಗ್ ಕಳೆದ 75ಕ್ಕೂ ಅಧಿಕ ವರ್ಷಗಳಿಂದ ಇಸ್ರೇಲ್‌ನೊಂದಿಗೆ ಸಂಬಂಧ ಹೊಂದಿದೆ. ಅಮೆರಿಕ ಸರಕಾರ ಅನುಮೋದಿಸಿದ ವಾಣಿಜ್ಯ ಒಪ್ಪಂದದ ಭಾಗವಾಗಿ ಬೋಯಿಂಗ್ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದೆ.

ಮೇ ನಲ್ಲಿ ಎನ್‌ಪಿಆರ್ ನೆಟ್‌ವರ್ಕ್ ಮಾಡಿದ ವರದಿ ಪ್ರಕಾರ ಅಮೆರಿಕದ ಕಂಪೆನಿಗಳಲ್ಲಿ ಬೋಯಿಂಗ್ 2021 ಹಾಗೂ 2023ರ ನಡುವೆ ಇಸ್ರೇಲ್‌ಗೆ ಬಾಂಬ್ ಹಾಗೂ ಸ್ಫೋಟಕಗಳ ಪೂರೈಕೆದಾರರಲ್ಲಿ ಪ್ರಥಮ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News