ಯುಟ್ಯೂಬರ್‌ ಸವುಕ್ಕು ಶಂಕರ್ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಬಂಧಿಸಿದ್ದಕ್ಕೆ ತಮಿಳುನಾಡು ವಿರುದ್ಧ ಸುಪ್ರೀಂ ಕೋರ್ಟ್ ಆಕ್ರೋಶ‌

Update: 2024-08-24 15:21 GMT

 ಸವುಕ್ಕು ಶಂಕರ್ | PC : thehindu.com

ಹೊಸದಿಲ್ಲಿ: ಮದ್ರಾಸ್ ಉಚ್ಚ ನ್ಯಾಯಾಲಯವು ಯೂಟ್ಯೂಬರ್ ಸವುಕ್ಕು ಶಂಕರ್ ಬಂಧನವನ್ನು ರದ್ದುಗೊಳಿಸಿದ ಬೆನ್ನಿಗೇ ಅವರನ್ನು ಪೋಲಿಸರು ಮತ್ತೆ ವಶಕ್ಕೆ ತೆಗೆದುಕೊಂಡಿದ್ದನ್ನು ಗಮನಿಸಿದ ಸರ್ವೋಚ್ಚ ನ್ಯಾಯಾಲಯವು,ಅವರು ಜೈಲಿನಲ್ಲಿಯೇ ಉಳಿಯುವಂತೆ ಮಾಡಲು ತಮಿಳುನಾಡು ಸರಕಾರವು ತನ್ನ ಶಕ್ತಿಯನ್ನು ಬಳಸುತ್ತಿದೆ ಎಂದು ಕಿಡಿಕಾರಿದೆ.

ಶಂಕರ ವಿರುದ್ಧ ದಾಖಲಾಗಿರುವ 16 ಎಫ್‌ಐಆರ್‌ಗಳನ್ನು ಪ್ರಶ್ನಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರ ಪೀಠವು ಈ ಟೀಕೆಯನ್ನು ಮಾಡಿತು.

ಈ ಎಲ್ಲ ಪ್ರಕರಣಗಳು ಶಂಕರ ಎ.30ರಂದು ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ್ದ ಸಂದರ್ಶನಕ್ಕೆ ಸಂಬಂಧಿಸಿವೆ. ಸಂದರ್ಶನದಲ್ಲಿ ಅವರು ಮಹಿಳಾ ಪೋಲಿಸ್ ಸಿಬ್ಬಂದಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದರು ಎನ್ನಲಾಗಿದೆ.

ಆದರೆ,ರಾಜಕಾರಣಿಗಳು ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ತಾನು ಮಾತನಾಡುವುದನ್ನು ತಡೆಯಲು ಈ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಶಂಕರ್ ಹೇಳಿಕೊಂಡಿದ್ದಾರೆ.

ಆ.9ರಂದು ಶಂಕರ ವಿರುದ್ಧ ತಮಿಳುನಾಡು ಸರಕಾರದ ಕ್ರಮಗಳು ದುರುದ್ದೇಶದಿಂದ ಕೂಡಿವೆ ಎಂದು ಹೇಳಿದ್ದ ಮದ್ರಾಸ್ ಉಚ್ಚ ನ್ಯಾಯಾಲಯವು ಅವರ ಬಂಧನವನ್ನು ರದ್ದುಗೊಳಿಸಿತ್ತು.

ತಮಿಳುನಾಡು ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ,1982ರಡಿ ಶಂಕರ ಅವರನ್ನು ಬಂಧಿಸಲಾಗಿತ್ತು. ಆ.12ರಂದು ಅವರಿಗೆ ಜಾಮೀನು ಲಭಿಸಿದ್ದು,ಸಂಜೆ ಐದು ಗಂಟೆಗೆ ಜೈಲಿನಿಂದ ಬಿಡುಗಡೆಗೊಳ್ಳಬೇಕಿತ್ತು.ಆದರೆ ಸಂಜೆ 5:45ಕ್ಕೆ ಅವರನ್ನು ಮಾದಕ ದ್ರವ್ಯಗಳ ಕಾಯ್ದೆಯಡಿ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರು ನಾಲ್ಕು ತಿಂಗಳುಗಳ ಹಿಂದೆಯೇ ಜಾಮೀನು ಪಡೆದುಕೊಂಡಿದ್ದರು.

ನೀವು ಇದನ್ನೆಲ್ಲ ಏಕೆ ಮಾಡುತ್ತಿದ್ದೀರಿ ಎಂದು ಶುಕ್ರವಾರ ತಮಿಳುನಾಡು ಸರಕಾರವನ್ನು ಪ್ರಶ್ನಿಸಿದ ಸರ್ವೋಚ್ಚ ನ್ಯಾಯಾಲಯವು,ಶಂಕರ ಬಿಡುಗಡೆಗೊಂಡ ಬೆನ್ನಲ್ಲೇ ಅವರನ್ನು ಮತ್ತೆ ಕಂಬಿಗಳ ಹಿಂದೆ ತಳ್ಳುತ್ತಿದ್ದೀರಿ ಎಂದು ಕಟುವಾಗಿ ನುಡಿಯಿತು.

ಶಂಕರ್ ಅವರ ಇತ್ತೀಚಿನ ಬಂಧನವನ್ನು ಪ್ರಸ್ನಿಸಿ ಸಲ್ಲಿಸಲಾಗಿರುವ ಇನ್ನೊಂದು ಬಾಕಿಯುಳಿದಿರುವ ಹೇಬಿಯಸ್ ಕಾರ್ಪಸ್ ಅರ್ಜಿಯೊಂದಿಗೆ ಈ ಅರ್ಜಿಯನ್ನೂ ಸೇರಿಸುವಂತೆ ಅವರ ಪರ ವಕೀಲರು ಪೀಠವನ್ನು ಕೋರಿಕೊಂಡರು.

ನ್ಯಾಯಾಲಯವು ವಿಚಾರಣೆಯನ್ನು ಆ.27ಕ್ಕೆ ಮುಂದೂಡಿದೆ.

ಗುರುವಾರ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು ತಮಿಳುನಾಡು ಸರಕಾರಕ್ಕೆ ನೋಟಿಸ್ ಹೊರಡಿಸಿತ್ತು ಮತ್ತು ಶಂಕರ್ ಬಂಧನ ಕುರಿತು ಉತ್ತರಿಸುವಂತೆ ಸೂಚಿಸಿತ್ತು.

ಶಂಕರ ವಿರುದ್ಧ ದಾಖಲಾಗಿರುವ 16 ಪ್ರಕರಣಗಳಲ್ಲಿ ಬಲವಂತದ ಕ್ರಮವನ್ನು ತೆಗೆದುಕೊಳ್ಳದಂತೆ ಸರ್ವೋಚ್ಚ ನ್ಯಾಯಾಲಯವು ಆ.14ರಂದು ತಮಿಳನಾಡು ಪೋಲಿಸರಿಗೆ ತಾಕೀತು ಮಾಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News