ಸುಪ್ರೀಂ ಕೋರ್ಟ್ ಅದಾನಿ ಹಗರಣದ ತನಿಖೆಯನ್ನು ಸಿಬಿಐ ಅಥವಾ ಸಿಟ್‌ಗೆ ಒಪ್ಪಿಸಬೇಕು : ಕಾಂಗ್ರೆಸ್

Update: 2024-08-12 15:45 GMT

ಹೊಸದಿಲ್ಲಿ : ಸೆಬಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ವಿರುದ್ಧ ಹಿಂಡೆನ್‌ ಬರ್ಗ್ ರೀಸರ್ಚ್‌ ನ ಆರೋಪಗಳ ಕುರಿತು ತೀವ್ರ ವಿವಾದದ ನಡುವೆ ಸೋಮವಾರ ಅವರ ರಾಜೀನಾಮೆಗೆ ಆಗ್ರಹಿಸಿರುವ ಕಾಂಗ್ರೆಸ್, ಸೆಬಿ ರಾಜಿ ಮಾಡಿಕೊಂಡಿರುವ ಸಾಧ್ಯತೆಯನ್ನು ಪರಿಗಣಿಸಿ ಅದಾನಿ ತನಿಖೆಯನ್ನು ಸಿಬಿಐ ಅಥವಾ ವಿಶೇಷ ತನಿಖಾ ತಂಡ(ಸಿಟ್)ಕ್ಕೆ ವರ್ಗಾಯಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದೆ.

‘ಸ್ವಯಂಘೋಷಿತ ಅಜೈವಿಕ ಪ್ರಧಾನಿ ಮತ್ತು ಪರಿಪೂರ್ಣ ಜೈವಿಕ ಉದ್ಯಮಿ’ಯನ್ನು ಒಳಗೊಂಡಿರುವ ‘ಮೋದಾನಿ ಮೆಗಾ ಹಗರಣ’ದ ಸಂಪೂರ್ಣ ವ್ಯಾಪ್ತಿಯ ತನಿಖೆಗಾಗಿ ತಕ್ಷಣವೇ ಜಂಟಿ ಸಂಸದೀಯ ಸಮಿತಿಯನ್ನು ರಚಿಸುವುದು ಮುಂದಿನ ಮಾರ್ಗವಾಗಿದೆ ಎಂದೂ ಕಾಂಗ್ರೆಸ್ ಪುನರುಚ್ಚರಿಸಿದೆ.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸಲಾಗಿದೆ ಮತ್ತು ಅಧ್ಯಕ್ಷೆ ಮಾಧವಿ ಬುಚ್ ಅವರು ಕಾಲಕಾಲಕ್ಕೆ ವಿವರಗಳನ್ನು ಬಹಿರಂಗಗೊಳಿಸಿದ್ದರು ಮತ್ತು ವಿಷಯಗಳೊಂದಿಗೆ ವ್ಯವಹರಿಸುವಾಗ ದೂರವುಳಿದಿದ್ದರು ಎಂದು ಸೆಬಿ ರವಿವಾರ ಹೇಳಿತ್ತು.

ಜೆಪಿಸಿ ತನಿಖೆಗಾಗಿ ಪಕ್ಷದ ಬೇಡಿಕೆಯನ್ನು ಒಪ್ಪಿಕೊಳ್ಳದಿದ್ದರೆ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸುವುದಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಎಚ್ಚರಿಕೆ ನೀಡಿದ್ದಾರೆ. ಅದಾನಿಯನ್ನು ಬೆಂಬಲಿಸುತ್ತಿರುವುದಕ್ಕಾಗಿ ಪ್ರಧಾನಿಯನ್ನು ಟೀಕಿಸಿರುವ ಅವರು, ಸರಕಾರವು ವಿಷಯದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಜಾರಿ ನಿರ್ದೇಶನಾಲಯ (ಈಡಿ)ವನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.

ಅದಾನಿ ಗ್ರೂಪ್‌ನ ಕೆಲವು ಹಣಕಾಸು ವ್ಯವಹಾರಗಳ ಬಗ್ಗೆ ಪ್ರಗತಿಯಲ್ಲಿರುವ ತನಿಖೆಯ ಕುರಿತು ನೀಡಿರುವ ಹೇಳಿಕೆಯಲ್ಲಿ ಸೆಬಿ, ತಾನು 100 ಸಮನ್ಸ್ ಹೊರಡಿಸಿದ್ದೇನೆ, 1,100 ಪತ್ರಗಳು ಮತ್ತು ಇ-ಮೇಲ್‌ಗಳನ್ನು ಕಳುಹಿಸಿದ್ದೇನೆ ಮತ್ತು 12,000 ಪುಟಗಳನ್ನೊಳಗೊಂಡ 300 ದಾಖಲೆಗಳನ್ನು ಪರಿಶೀಲಿಸಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಅತಿ ಚಟುವಟಿಕೆಯ ಚಿತ್ರಣವನ್ನು ಬಿಂಬಿಸಲು ಪ್ರಯತ್ನಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಹೇಳಿದರು.

ಇದು ತುಂಬ ಶ್ರಮದಾಯಕವಾಗಿರಬಹುದು, ಆದರೆ ಇದು ಪ್ರಮುಖ ವಿಷಯಗಳಿಂದ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ. ಕ್ರಮಗಳು ಮುಖ್ಯ,ಚಟುವಟಿಕೆಗಳಲ್ಲ ಎಂದು ರಮೇಶ್ ಸೋಮವಾರ ಹೇಳಿಕೆಯಲ್ಲಿ ತಿಳಿಸಿದರು.

ಭಾರತದ ಹಣಕಾಸು ಮಾರುಕಟ್ಟೆಗಳ ನ್ಯಾಯೋಚಿತತೆಯಲ್ಲಿ ನಂಬಿಕೆಯನ್ನು ಹೊಂದಿರುವ ಕೋಟ್ಯಂತರ ಭಾರತೀಯರ ಪರವಾಗಿ ಈ ಮಾರುಕಟ್ಟೆಗಳ ಮೇಲ್ವಿಚಾರಕನಾಗಿ ತನ್ನ ಪಾತ್ರವನ್ನು ಸೆಬಿ ನಿರ್ವಹಿಸಬೇಕು ಎಂದು ಆಗ್ರಹಿಸಿ ತಾನು 2023, ಫೆ.14ರಂದು ಸೆಬಿ ಅಧ್ಯಕ್ಷರಿಗೆ ಪತ್ರವನ್ನು ಬರೆದದ್ದೆ. ಅದಕ್ಕೆ ಉತ್ತರ ತನಗೆ ಈವರೆಗೆ ಲಭಿಸಿಲ್ಲ ಎಂದು ಅವರು ಹೇಳಿದರು.

ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಯನ್ನು ಎರಡು ತಿಂಗಳುಗಳಲ್ಲಿ ಪೂರ್ಣಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು 2023,ಮಾ.3ರಂದು ಸೆಬಿಗೆ ನಿರ್ದೇಶನ ನೀಡಿತ್ತು. ಅದಾಗಿ 18 ತಿಂಗಳುಗಳ ಬಳಿಕ ಈಗ ಸೆಬಿ, ಕನಿಷ್ಠ ಸಾರ್ವಜನಿಕ ಶೇರು ಹಿಡುವಳಿಗೆ ಸಂಬಂಧಿಸಿದ ನಿಯಮ 19 ಎ ಅನ್ನು ಅದಾನಿ ಗ್ರೂಪ್ ಉಲ್ಲಂಘಿಸಿತ್ತೇ ಎಂಬ ಬಗ್ಗೆ ನಿರ್ಣಾಯಕ ತನಿಖೆ ಅಪೂರ್ಣವಾಗಿ ಉಳಿದಿದೆ ಎನ್ನುವುದನ್ನು ಬಹಿರಂಗಗೊಳಿಸಿದೆ. ವಾಸ್ತವವೆಂದರೆ ತನ್ನ 24 ತನಿಖೆಗಳಲ್ಲಿ ಎರಡನ್ನು ಪೂರ್ಣಗೊಳಿಸುವಲ್ಲಿ ಸೆಬಿಯು ತೋರಿಸಿದ ಅಸಮರ್ಥತೆಯು ಅದರ ತನಿಖಾ ವರದಿಯ ಪ್ರಕಟಣೆಯನ್ನು ಒಂದು ವರ್ಷಕ್ಕೂ ಅಧಿಕ ಸಮಯ ವಿಳಂಬಿಸಿತ್ತು. ಈ ವಿಳಂಬವು ತನ್ನ ಆಪ್ತಸ್ನೇಹಿತ ಗೌತಮ್ ಅದಾನಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಅನುಕೂಲತೆ ಕಲ್ಪಿಸುವಲ್ಲಿ ತನ್ನ ಪಾತ್ರದ ಬಗ್ಗೆ ಯಾವುದೇ ವಿವರಣೆ ನೀಡದೆ ಇಡೀ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಪ್ರಧಾನಿ ಮೋದಿಯವರಿಗೆ ಸುಗಮ ಅವಕಾಶವನ್ನು ಒದಗಿಸಿತ್ತು ಎಂದು ರಮೇಶ್ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News