ಸ್ಟಿಂಗ್ ಆಪರೇಷನ್ ಪ್ರಕರಣ : ಅರುಣ್ ಪುರಿ, ರಾಜ್ ದೀಪ್ ಸರ್ದೇಸಾಯಿ ಹಾಗೂ ಶಿವ್ ಅರೂರ್ ವಿರುದ್ಧದ ಮಾನಹಾನಿ ಪ್ರಕರಣಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ : 2016ರಲ್ಲಿ ನಡೆದಿತ್ತೆನ್ನಲಾದ ವೋಟಿಗಾಗಿ ನಗದು ಆರೋಪದ ಕುರಿತು ಇಂಡಿಯಾ ಟುಡೆ ಸಮೂಹವು ಪ್ರಸಾರ ಮಾಡಿದ್ದ ಸ್ಟಿಂಗ್ ಆಪರೇಷನ್ ಸಂಬಂಧ ಇಂಡಿಯಾ ಟುಡೆ ಸಮೂಹದ ಮುಖ್ಯಸ್ಥ ಅರುಣ್ ಪುರಿ ಹಾಗೂ ಪತ್ರಕರ್ತರಾದ ರಾಜ್ ದೀಪ್ ಸರ್ದೇಸಾಯಿ ಮತ್ತು ಶಿವ್ ಅರೂರ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ ದಾವೆಗೆ ಸೋಮವಾರ ಸುಪ್ರೀಂ ಕೋರ್ಟ್ ತಡೆ ನೀಡಿದೆ.
2016ರಲ್ಲಿ ನಡೆದಿದ್ದ ರಾಜ್ಯಸಭಾ ಚುನಾವಣೆಗೂ ಮುನ್ನ ಕೆಲವು ಕರ್ನಾಟಕದ ಶಾಸಕರಿಗೆ ಮತ ಚಲಾಯಿಸಲು ಲಂಚ ನೀಡಲಾಗಿತ್ತು ಎಂದು ಸೂಚಿಸುವ ವರದಿಯನ್ನು ಇಂಡಿಯಾ ಟುಡೆ ಸುದ್ದಿ ಸಂಸ್ಥೆ ಪ್ರಸಾರ ಮಾಡಿತ್ತು.
ಈ ವರದಿಗೆ ಸಂಬಂಧಿಸಿದಂತೆ ಇಂಡಿಯಾ ಟುಡೆ ಮುಖ್ಯಸ್ಥ ಅರುಣ್ ಪುರಿ, ರಾಜ್ ದೀಪ್ ಸರ್ದೇಸಾಯಿ ಹಾಗೂ ಶಿವ್ ಅರೂರ್ ವಿರುದ್ಧ ಕರ್ನಾಟಕದ ಮಾಜಿ ಶಾಸಕರಾದ ಬಿ.ಆರ್.ಪಾಟೀಲ್ ಮಾನಹಾನಿ ದಾವೆ ದಾಖಲಿಸಿದ್ದರು. ಸ್ಟಿಂಗ್ ಆಪರೇಷನ್ ವರದಿಯಲ್ಲಿ ಆರೋಪಕ್ಕೀಡಾಗಿದ್ದ ಶಾಸಕರ ಪೈಕಿ ಬಿ.ಆರ್.ಪಾಟೀಲ್ ಕೂಡಾ ಓರ್ವರಾಗಿದ್ದರು.
ಈ ಮಾನಹಾನಿ ದಾವೆಗೆ ತಡೆ ನೀಡಲು ಡಿಸೆಂಬರ್ 2023ರಲ್ಲಿ ಕರ್ನಾಟಕ ಹೈಕೋರ್ಟ್ ನಿರಾಕರಿಸಿತ್ತು. ಇದರಿಂದಾಗಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು.
ಸೋಮವಾರ ಈ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ, ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಮನೋಶ್ ಮಿಶ್ರ ಅವರನ್ನೊಳಗೊಂಡ ನ್ಯಾಯಪೀಠವು ಕ್ರಿಮಿನಲ್ ಮಾನಹಾನಿ ದಾವೆಗೆ ತಡೆ ನೀಡಿತಲ್ಲದೆ, ಈ ಪ್ರಕರಣದ ಸಂಬಂಧ ಪ್ರತಿಕ್ರಿಯಿಸುವಂತೆ ಕರ್ನಾಟಕ ಸರಕಾರಕ್ಕೆ ಸೂಚಿಸಿತು.
ಅರುಣ್ ಪುರಿ, ರಾಜ್ ದೀಪ್ ಸರ್ದೇಸಾಯಿ ಹಾಗೂ ಶಿವ್ ಅರೂರ್ ಪರವಾಗಿ ಹಿರಿಯ ವಕೀಲ ಡಾ. ಎಸ್.ಮುರಳೀಧರ್ ನ್ಯಾಯಾಲಯದಲ್ಲಿ ಹಾಜರಿದ್ದರು.