Fact Check: ಆಸ್ಕರ್ ಪ್ರಶಸ್ತಿಗೆ ಭಾರತದಿಂದ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರ ಪ್ರವೇಶ ಪಡೆದಿದೆಯೇ?

Update: 2024-09-25 10:35 GMT

PC : X \ @anandpandit63

ಮುಂಬೈ: 2025ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ʼಲಾಪತಾ ಲೇಡೀಸ್ʼ ಚಲನಚಿತ್ರವನ್ನು ನಾಮಿನೇಟ್ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸೋಮಾವಾರ ಪ್ರಕಟಣೆಯಲ್ಲಿ ತಿಳಿಸಿತ್ತು. ಆದ್ರೆ, ಮಂಗಳವಾರ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರವನ್ನು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ 2025ರ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಮಾಡಿದೆ ಎಂದು ಸಾಮಾಜಿಕ ಜಾಲತಾಣ ಮತ್ತು ಮುಖ್ಯ ವಾಹಿನಿ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದವು.

ಚಿತ್ರ ನಿರ್ಮಾಪಕರಾದ ಸಂದೀಪ್ ಸಿಂಗ್, ಆನಂದ್ ಪಂಡಿತ್, ನಟಿ ಅಂಕಿತಾ ಮತ್ತು ಲೆಜೆಂಡ್ ಸ್ಟುಡಿಯೋ ಇನ್ಸ್ಟಾಗ್ರಾಂನಲ್ಲಿ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿದೆ ಎಂಬ ಪೋಸ್ಟ್ ಹಂಚಿಕೊಂಡಿದ್ದರು.

ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ, “ನಮ್ಮ ಸಿನಿಮಾ ಆಸ್ಕರ್ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಫಿಲ್ಮ್ ಫೆಡರೇಷನ್ ಗೆ ಧನ್ಯವಾದಗಳು. ಇದೊಂದು ರೋಮಾಂಚನಕಾರಿ ಪ್ರಯಾಣವಾಗಿದ್ದು, ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು" ಎಂದು ಹೇಳಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರದ ಪೋಸ್ಟರ್ ಕೂಡ ಕಾಣಿಸಿಕೊಂಡಿದೆ. ಈ ಬಗ್ಗೆ ರಾಷ್ಟ್ರೀಯ ಮತ್ತು ರಾಜ್ಯ ಮಾಧ್ಯಮಗಳು ಸುದ್ದಿಯನ್ನು ಕೂಡ ಬಿತ್ತರಿಸಿದ್ದವು.

'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರ ವಿನಾಯಕ್ ದಾಮೋದರ್ ಸಾವರ್ಕರ್ ಜೀವನಚರಿತ್ರೆ ಕುರಿತಾದ ಚಲನಚಿತ್ರವಾಗಿದೆ. ಈ ಚಲನ ಚಿತ್ರವು 'ಬಿಜೆಪಿಯ ಪ್ರಚಾರದ ಅಸ್ತ್ರ' ಎಂದು ಹಿಂದೆ ಪ್ರತಿಪಕ್ಷಗಳು ಕೂಡ ಟೀಕಿಸಿದ್ದವು.

'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರ ಆಸ್ಕರ್ ಗೆ ನಾಮಿನೇಟ್ ಆಗಿದ್ಯಾ? ವಾಸ್ತವವೇನು?

'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಲನಚಿತ್ರ ಆಸ್ಕರ್ ಗೆ ನಾಮಿನೇಟ್ ಆಗಿದೆ ಎಂದು ಸುದ್ದಿಯಾಗುತ್ತಿದ್ದಂತೆ ಕುದ್ದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಸ್ಪಷ್ಟನೆಯನ್ನು ನೀಡಲು ಮುಂದೆ ಬಂದಿದೆ.

Hindustan Times ಜೊತೆ ಮಾತನಾಡಿದ ಎಫ್ಎಫ್ಐ ಅಧ್ಯಕ್ಷ ರವಿ ಕೊಟ್ಟಕರ, 'ಸ್ವಾತಂತ್ರ್ಯ ವೀರ್ ಸಾವರ್ಕರ್' ಚಿತ್ರವನ್ನು ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಮಾಡಲಾಗಿಲ್ಲ, ನಿರ್ಮಾಪಕರು ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಅವರು ತಪ್ಪು ಮಾಹಿತಿಯನ್ನು ನೀಡಿದ್ದಾರೆ. ನಾವು ಅದರ ಬಗ್ಗೆ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ. ಭಾರತದಿಂದ ಅಧಿಕೃತವಾಗಿ ಆಸ್ಕರ್ಗಾಗಿ ʼಲಾಪತಾ ಲೇಡೀಸ್ʼ ಚಿತ್ರವನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News