ಹರ್ಯಾಣ ವಿಧಾನಸಭಾ ಚುನಾವಣೆ | ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯ ದಿವಾಳಿಯಾಗಲಿದೆ : ಪ್ರಧಾನಿ ಮೋದಿ

Update: 2024-09-25 13:11 GMT

ನರೇಂದ್ರ ಮೋದಿ | PC : PTI 

ಸೋನಿಪತ್ : ಒಂದು ವೇಳೆ ಕಾಂಗ್ರೆಸ್ ಆಕಸ್ಮಿಕವಾಗಿ ಅಧಿಕಾರಕ್ಕೆ ಬಂದರೂ, ಒಳಜಗಳದಿಂದ ರಾಜ್ಯವನ್ನೇ ದಿವಾಳಿಯಾಗಿಸಲಿದೆ ಎಂದು ಮಂಗಳವಾರ ವಿಪಕ್ಷ ಕಾಂಗ್ರೆಸ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀಕ್ಷ್ಣ ವಾಗ್ದಾಳಿ ನಡೆಸಿದರು.

ಅಕ್ಟೋಬರ್ 5ರಂದು ನಡೆಯಲಿರುವ ಹರ್ಯಾಣ ವಿಧಾನಸಭಾ ಚುನಾವಣೆ ಪ್ರಯುಕ್ತ ಸೋನಿಪತ್ ಜಿಲ್ಲೆಯ ಗೊಹಾನಾದಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಪಕ್ಷವಾದ ಕಾಂಗ್ರೆಸ್ ಮೀಸಲಾತಿಯನ್ನು ವಿರೋಧಿಸುತ್ತಿದ್ದು, ಮೀಸಲಾತಿ ವಿರುದ್ಧದ ದ್ವೇಷ ಅದರ ಡಿಎನ್ಎನಲ್ಲೇ ಇದೆ ಎಂದು ಕಿಡಿ ಕಾರಿದರು.

ಕಾಂಗ್ರೆಸ್ ಸರಕಾರಗಳು ಅಸ್ಥಿರತೆಗೆ ಕುಖ್ಯಾತವಾಗಿವೆ. ಕಳೆದ ಕೆಲವು ವರ್ಷಗಳಲ್ಲಿ ಕಾಂಗ್ರೆಸ್ ಎಲ್ಲೆಲ್ಲ ಸರಕಾರ ರಚಿಸಿದೆಯೊ, ಅಲ್ಲೆಲ್ಲ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ಒಳಜಗಳದಲ್ಲಿ ನಿರತರಾಗಿದ್ದಾರೆ. ಅವರಿಗೆ ಜನರ ನೋವು ಮತ್ತು ಸಮಸ್ಯೆಗಳ ಅಗತ್ಯವಿಲ್ಲ ಎಂದು ಕರ್ನಾಟಕ ಕಾಂಗ್ರೆಸ್ ಸರಕಾರದ ಉದಾಹರಣೆ ನೀಡಿ ವ್ಯಂಗ್ಯವಾಡಿದರು.

“ಕರ್ನಾಟಕದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಒಳ ಜಗಳದಲ್ಲಿ ನಿರತರಾಗಿದ್ದಾರೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲೂ ಇದೇ ಕತೆ” ಎಂದು ಅವರು ಕುಹಕವಾಡಿದರು.

ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ಅಧಿಕಾರದಲ್ಲಿದ್ದಾಗಲೂ ಕಾಂಗ್ರೆಸ್ ಒಳಜಗಳದಲ್ಲಿ ಮುಳುಗಿತ್ತು ಎಂದು ಅವರು ಆರೋಪಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News