ಕಾಲ್ತುಳಿತದಲ್ಲಿ ಗಾಯಗೊಂಡ ಬಾಲಕನಿಗೆ 2 ಕೋಟಿ ನೆರವು ನೀಡಿದ ಅಲ್ಲು ಅರ್ಜುನ್ ತಂದೆ

Update: 2024-12-26 05:51 GMT

ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಅಲ್ಲು ಅರವಿಂದ್ x.com/NewsRaghav

ಹೈದರಾಬಾದ್: ಸಂಧ್ಯಾ ಥಿಯೇಟರ್ ಎದುರು ಡಿಸೆಂಬರ್ 4ರಂದು ನಡೆದ ಕಾಲ್ತುಳಿತದಲ್ಲಿ ಗಾಯಗೊಂಡ ಎಂಟು ವರ್ಷದ ಬಾಲಕ ಶ್ರೀತೇಜ್ ಕುಟುಂಬಕ್ಕೆ ತೆಲುಗು ಸ್ಟಾರ್ ಅಲ್ಲು ಅರ್ಜುನ್ ಅವರ ತಂದೆ ಮತ್ತು ಟಾಲಿವುಡ್ ಚಿತ್ರ ನಿರ್ಮಾಪಕ ಅಲ್ಲು ಅರವಿಂದ್ ಬುಧವಾರ 2 ಕೋಟಿ ರೂಪಾಯಿ ಪರಿಹಾರ ಚೆಕ್ ವಿತರಿಸಿದರು.

ಶ್ರೀತೇಜ್ ತಾಯಿ ರೇವತಿ ಈ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು. ಶ್ರೀತೇಜ್ ಪ್ರಸ್ತುತ ಹೈದರಾಬಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಲಕನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅರವಿಂದ್, "ಅಲ್ಲು ಅರ್ಜುನ್ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಪುಷ್ಪಾ-2 ನಿರ್ಮಾಪಕರು 50 ಲಕ್ಷ ಹಾಗೂ ಚಿತ್ರದ ನಿರ್ದೇಶಕ ಸುಕುಮಾರ್ 50 ಲಕ್ಷ ನೀಡಿದ್ದಾರೆ" ಎಂದು ಪ್ರಕಟಿಸಿದರು.

ತೆಲುಗು ಚಿತ್ರ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದಿಲ್ ರಾಜು ಅವರು ಒಟ್ಟು 2 ಕೋಟಿ ರೂಪಾಯಿ ಪರಿಹಾರ ಮೊತ್ತದ ಚೆಕ್ಕನ್ನು ಶ್ರೀತೇಜ್ ಕುಟುಂಬಕ್ಕೆ ಹಸ್ತಾಂತರಿಸಿದರು. ಎಫ್ ಡಿಸಿ ಮುಖ್ಯಸ್ಥ ಮತ್ತು ಪುಷ್ಪಾ-2 ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ನ ವೈ.ರವಿಶಂಕರ್ ಅವರು ಅರವಿಂದ್ ಜತೆ ಆಸ್ಪತ್ರೆಗೆ ತೆರಳಿದ್ದರು.

"ಕಳೆದ 72 ಗಂಟೆಗಳಿಂದ ಆಮ್ಲಜನಕ ಬೆಂಬಲದ ನೆರವು ಇಲ್ಲದೇ ಶ್ರೀತೇಜ್ ಚೇತರಿಸಿಕೊಳ್ಳುತ್ತಿದ್ದಾನೆ. ತ್ವರಿತವಾಗಿ ಗುಣಮುಖನಾಗುವಂತೆ ನಾವು ಪ್ರಾರ್ಥಿಸಿದ್ದೇವೆ. ಈ ಹಣ ಆತನ ಶಿಕ್ಷಣಕ್ಕೆ ಮತ್ತು ಯೋಗಕ್ಷೇಮಕ್ಕೆ ನೆರವಾಗಲಿದೆ" ಎಂದು ದಿಲ್‌ರಾಜು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News