ತೆಲಂಗಾಣ ಲೋಕಸೇವಾ ಆಯೋಗ ಪರೀಕ್ಷೆ ಮುಂದೂಡಿಕೆ ಬೆನ್ನಲ್ಲೇ ಯುವತಿ ಆತ್ಮಹತ್ಯೆ; ವಿದ್ಯಾರ್ಥಿಗಳ ಪ್ರತಿಭಟನೆ
ಹೈದರಾಬಾದ್: ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ ಪರೀಕ್ಷೆಗಳನ್ನು ರಾಜ್ಯ ಸರ್ಕಾರ ಮುಂದೂಡಿದ್ದರಿಂದ ಮನನೊಂದು ಸ್ಪರ್ಧಾತ್ಮಕ ಪರೀಕ್ಷೆಗಾಗಿ ಅಶೋಕನಗರ ಪ್ರದೇಶದ ಹಾಸ್ಟೆಲಿನಲ್ಲಿ ಉಳಿದುಕೊಂಡು ತಯಾರಿ ನಡೆಸುತ್ತಿದ್ದ 23 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸುದ್ದಿಯ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ಆರಂಭಿಸಿದ್ದಾರೆ.
ಯುವತಿಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲೂ ಪ್ರತಿಭಟನಾಕಾರರು ಶುಕ್ರವಾರ ರಾತ್ರಿ ತಡೆಯೊಡ್ಡಿದ್ದಾರೆ. ಯುವತಿ ಡೆತ್ ನೋಟ್ ಬರೆದಿಟ್ಟಿದ್ದಳು ಹಾಗೂ ಹೆತ್ತವರಿಗಾಗಿ ಏನೂ ಮಾಡಲು ಸಾಧ್ಯವಾಗದೇ ಇದ್ದುದಕ್ಕೆ ಕ್ಷಮೆಯಾಚಿಸಿ ಅದರಲ್ಲಿ ಬರೆದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಆಕೆ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆಕೆಯ ಹಾಸ್ಟೆಲಿನ ಗೆಳತಿಯರು ಹೇಳಿದರೆ, ಪ್ರತಿಭಟನಾಕಾರರು ಮಾತ್ರ ತೆಲಂಗಾಣ ರಾಜ್ಯ ಲೋಕಸೇವಾ ಆಯೋಗವು ಗ್ರೂಪ್-2 ಪರೀಕ್ಷೆ ಮುಂದೂಡಿದ್ದರಿಂದ ಆಕೆ ಆತ್ಮಹತ್ಯೆಗೈದಿದ್ದಾಳೆಂದು ಆರೋಪಿಸಿದ್ದಾರೆ. ಯುವತಿ ವಾರಂಗಲ್‌ನವಳೆಂದು ತಿಳಿದು ಬಂದಿದೆ.
ಹಲವು ಕಾಂಗ್ರೆಸ್ ಮುಖಂಡರೂ ಪ್ರತಿಭಟನೆಯಲ್ಲಿ ಭಾಗಿಯಾಗಿ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.