18ನೇ ಲೋಕಸಭೆಯ ಮೊದಲ ಅಧಿವೇಶನ ಜೂನ್‌ 24ರಂದು ಆರಂಭ

Update: 2024-06-12 06:28 GMT

ಸಾಂದರ್ಭಿಕ ಚಿತ್ರ | PC : PTI 

 

ಹೊಸದಿಲ್ಲಿ: ಹದಿನೆಂಟನೇ ಲೋಕಸಭೆಯ ಮೊದಲ ಅಧಿವೇಶನ ಜೂನ್‌ 24ರಂದು ಆರಂಭಗೊಳ್ಳಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಹೇಳಿದ್ದಾರೆ.

ಈ ಅಧಿವೇಶನದಲ್ಲಿ ಎಲ್ಲಾ ನೂತನ ಸಂಸದರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಜೂನ್‌ 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಎರಡೂ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಅಧಿವೇಶನ ಜುಲೈ 3ರಂದು ಅಂತ್ಯಗೊಳ್ಳಲಿದೆ. ಈ ಅಧಿವೇಶನದ ವೇಳೆ ಲೋಕಭೆಯ ನೂತನ ಸ್ಪೀಕರ್‌ ಆಯ್ಕೆಯಾಗಲಿದ್ದಾರೆ. ಬಿಜೆಪಿ ಮತ್ತು ಅದರ ಎನ್‌ಡಿಎ ಮಿತ್ರಪಕ್ಷಗಳ ನಡುವೆ ಈ ಮಹತ್ವದ ಹುದ್ದೆಗೆ ಈಗಾಗಲೇ ಮಾತುಕತೆಗಳು ನಡೆಯುತ್ತಿವೆ.

ಲೋಕಸಭೆಯ ಮೊದಲ ಸಭೆಯಲ್ಲಿಯೇ ಸ್ಪೀಕರ್‌ ಆಯ್ಕೆ ನಡೆಯುತ್ತದೆ. ಇದಕ್ಕೂ ಮೊದಲು ಅತ್ಯಂತ ದೀರ್ಘಾವಧಿ ಸಂಸದರಾಗಿ ಸೇವೆ ಸಲ್ಲಿಸಿದ ಸದಸ್ಯರೊಬ್ಬರನ್ನು ಹಂಗಾಮಿ ಸ್ಪೀಕರ್‌ ಆಗಿ ಆರಿಸಲಾಗುತ್ತದೆ. ಈ ಹಂಗಾಮಿ ಸ್ಪೀಕರ್‌ ನೂತನ ಸಂಸದರ ಪ್ರಮಾಣವಚನ ಸ್ವೀಕಾರ ವೇಳೆ ಸದನದ ಅಧ್ಯಕ್ಷತೆ ವಹಿಸುತ್ತಾರೆ.

ಎನ್‌ಡಿಎ ಮೈತ್ರಿಕೂಟದ ಪ್ರಮುಖ ಭಾಗವಾಗಿರುವ ಟಿಡಿಪಿ ಮತ್ತು ಜೆಡಿ(ಯು) ಸ್ಪೀಕರ್‌ ಹುದ್ದೆಗಾಗಿ ಪೈಪೋಟಿ ನಡೆಸುತ್ತಿವೆ ಎನ್ನಲಾಗಿದೆ.

90ರ ದಶಕದಲ್ಲಿ ವಾಜಪೇಯಿ ನೇತೃತ್ವದ ಮೈತ್ರಿ ಸರ್ಕಾರವಿದ್ದಾಗ ಟಿಡಿಪಿಯ ಜಿ ಎಂ ಸಿ ಬಾಲಯೋಗಿ ಸ್ಪೀಕರ್‌ ಆಗಿದ್ದನ್ನೂ ಮಿತ್ರಪಕ್ಷಗಳು ಬಿಜೆಪಿಗೆ ನೆನಪು ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News