ಆದಿವಾಸಿ ಪ್ರದೇಶಗಳಲ್ಲಿ ಕಲ್ಲಿದ್ದಲು ಗಣಿಗಾರಿಕೆ ಪುನಾರಂಭಿಸಿದ ಛತ್ತೀಸ್ ಗಢದ ನೂತನ ಬಿಜೆಪಿ ಸರ್ಕಾರ!
ರಾಯ್ಪುರ: ಡಿಸೆಂಬರ್ 21ರಂದು ಅಪರಿಚಿತ ವ್ಯಕ್ತಿಗಳು ಸಾಕ್ಷ್ಯಚಿತ್ರ ನಿರ್ಮಾಪಕ ಅಜಯ್ ಟಿ.ಜಿ. ಹಾಗೂ ಅರಣ್ಯ ಸಂಪನ್ಮೂಲಗಳ ಖಾಸಗೀಕರಣದ ವಿರುದ್ಧದ ಜನ ಚಳವಳಿಯಾಗಿರುವ ಛತ್ತೀಸ್ ಗಢ ಬಚಾವೊ ಆಂದೋಲನ್ ನ ಸಂಚಾಲಕ ಅಲೋಕ್ ಶುಕ್ಲಾರನ್ನು ಅಪಹರಿಸಿದ್ದಾರೆ ಎಂದು ವರದಿಯಾಗಿತ್ತು. ಅವರನ್ನು ಸಂಜೆ ಬಿಡುಗಡೆಗೊಳಿಸಲಾಗಿತ್ತು. ಛತ್ತೀಸ ಗಢ ಪೊಲೀಸರು ಆದಿವಾಸಿ ಹೋರಾಟಗಾರರನ್ನು ಬಂಧಿಸಿದ್ದ ಆದಿವಾಸಿ ಬಾಹುಳ್ಯದ ಸುರ್ಗುಜಾ ಜಿಲ್ಲೆಗೆ ಅವರಿಬ್ಬರೂ ತೆರಳುವಾಗ ಈ ಘಟನೆ ನಡೆದಿತ್ತು. ಪಾರ್ಸಾ ಈಸ್ಟ್ ಕೆಂಟೆ ಬಸನ್ (ಪಿಇಕೆಬಿ) ಹಂತ 2ರ ಗಣಿಗಾರಿಕೆ ಯೋಜನೆಯ ಭಾಗವಾಗಿರುವ ಹೊಂದಿರುವ ಜೀವವೈವಿಧ್ಯ ಸಂಪತ್ತು ಹೊಂದಿರುವ ಹಸ್ದಿಯೊ ಆರಂದ್ ಪ್ರಾಂತ್ಯದಲ್ಲಿ ದೊಡ್ಡ ಪ್ರಮಾಣದ ಅರಣ್ಯ ನಾಶಕ್ಕೆ ತೊಂದರೆ ನೀಡದಂತೆ ಗ್ರಾಮಸ್ಥರ ಮನವೊಲಿಸಲು ಪೊಲೀಸರು ಸಮಾಲೋಚನೆ ನಡೆಸಿದರು.
ತಾವು ಗ್ರಾಮಸ್ಥರನ್ನು ಮೌನವಾಗಿಸಲು ಅವರನ್ನು ವಶಕ್ಕೆ ಪಡೆದಿದ್ದೆವು ಎಂಬುದನ್ನು ಪೊಲೀಸರು ನಿರಾಕರಿಸಿದ್ದರೂ, ಛತ್ತೀಸ್ ಗಢದಲ್ಲಿ ಪ್ರಾರಂಭಗೊಳ್ಳಲಿರುವ ಕಾರ್ಪೊರೇಟ್ ರಾಜ್ ನ ಆರಂಭಿಕ ಹೆಜ್ಜೆಯಿದು ಎಂದು ಹಲವರು ಅಭಿಪ್ರಾಯ ಪಡುತ್ತಾರೆ. ಡಿಸೆಂಬರ್ 13ರಂದು ವಿಷ್ಣು ದಿಯೊ ಸಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಕ್ಕೂ ಮುನ್ನ ಭಾರಿ ಪ್ರಮಾಣದ ಮರಗಳನ್ನು ನೆಲಕ್ಕುರುಳಿಸಲಾಯಿತು. ಈ ಮರಗಳ ಹನನವು ತಜ್ಞರ ಅಭಿಪ್ರಾಯಗಳಿಗೆ ವಿರುದ್ಧವಾಗಿತ್ತಲ್ಲದೆ, ಕಳೆದ ವರ್ಷ ಛತ್ತೀಸ್ ಗಢ ರಾಜ್ಯ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದ್ದ ನಿರ್ಣಯ ಹಾಗೂ ಸ್ಥಳೀಯ ಪ್ರತಿಭಟನೆಗಳಿಗೆ ವಿರುದ್ಧವಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಛತ್ತೀಸ್ ಗಢ ರಾಜ್ಯದ ಪ್ರಪ್ರಥಮ ಮುಖ್ಯಮಂತ್ರಿ ಹಾಗೂ ಭಾರತದ ಶೇ. 7.5ರಷ್ಟಿರುವ ಪರಿಶಿಷ್ಟ ಬುಡಕಟ್ಟ ಸಮುದಾಯಗಳನ್ನು ಹೊಂದಿರುವ ರಾಜ್ಯದ ದಿಯೊ ಸಾಯಿ, ಕಲ್ಲಿದ್ದಲು ಗಣಿಗಾರಿಕೆ ಹಾಗೂ ಮರಗಳನ್ನು ಉರುಳಿಸುವ ನಿರ್ಧಾರವನ್ನು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಮಾಡಲಾಗಿತ್ತು ಹಾಗೂ ಈಗ ನಡೆಯುತ್ತಿರುವ ಕೆಲಸಗಳು ಆ ನಿರ್ಧಾರದ ವಿಸ್ತರಣೆಯಾಗಿವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಗ್ರಾಮಸ್ಥರ ಬಂಧನವನ್ನು ಕಾನೂನುಬಾಹಿರ ಹಾಗೂ ಅಪಾಯಕಾರಿ ಪೂರ್ವನಿದರ್ಶನ ಎಂದು ಬಣ್ಣಿಸಿರುವ ಶುಕ್ಲಾ, ಜನರ ಧ್ವನಿಯಲ್ಲಿ ಹತ್ತಿಕ್ಕಲು ಹಲವಾರು ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. “ಕೆಲವು ಪ್ರಕರಣಗಳಲ್ಲಿ, ಜನರು ತಮ್ಮ ಮನೆಯನ್ನು ತೊರೆಯುವುದಕ್ಕೂ ಮುನ್ನ ತಮ್ಮ ಬಟ್ಟೆಗಳನ್ನು ಬದಲಿಸಿಕೊಳ್ಳಲೂ ಪೊಲೀಸರು ಅವಕಾಶ ನೀಡಿಲ್ಲ” ಎಂದು ಅವರು Frontline ಗೆ ತಿಳಿಸಿದ್ದಾರೆ. ಡಿಸೆಂಬರ್ 28ರಂದು ರಾಯ್ಪುರದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶುಕ್ಲಾ, ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ರಾಜ್ಯಪಾಲ ಬಿಸ್ವಭೂಷಣ್ ಹರಿಚಂದನ್ ಅವರಿಗೆ ಮನವಿ ಸಲ್ಲಿಸಿದ್ದರು. ಸಂವಿಧಾನದ ಪರಿಚ್ಛೇದ 5ರ ಅನ್ವಯ ಸಂರಕ್ಷಿತ ಅರಣ್ಯವಾಗಿರುವ ಹಸ್ದಿಯೊ ಅರಣ್ಯ ಅರಣ್ಯ ಪ್ರದೇಶದಲ್ಲಿನ ಆದಿವಾಸಿಗಳ ಹಕ್ಕುಗಳನ್ನು ರಕ್ಷಿಸಲು ಮಧ್ಯಪ್ರವೇಶಿಸಬೇಕು ಎಂದು ಅವರನ್ನು ಆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಇತ್ತೀಚಿನ ಚುನಾವಣೆಯಲ್ಲಿ ಸುರ್ಗುಜ ಜಿಲ್ಲೆಯ ಎಲ್ಲ 14 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯು, ಸಾಲ್ಹಿ, ಹರಿಹರ್ ಪುರ್, ಫತೇಪುರ್ ಹಾಗೂ ಘಟ್ಬರದಂತಹ ಗ್ರಾಮಗಳ ಗ್ರಾಮಸಭಾಗಳ ಪ್ರತಿರೋಧದ ಹೊರತಾಗಿಯೂ ಈ ಭಾಗದ ಅರಣ್ಯ ಪ್ರದೇಶವನ್ನು ಪಿಇಕೆಬಿ ಹಂತ 2ಕ್ಕೆ ಹಸ್ತಾಂತರಿಸಿದೆ. ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಹಸ್ತಾಂತರಿಸಲಾಗಿರುವ ಮನವಿಯಲ್ಲಿ ಈಗ ನಡೆಯುತ್ತಿರುವ ಅರಣ್ಯ ನಾಶವು ಪಂಚಾಯತ್ (ಅನುಸೂಚಿತ ಪ್ರದೇಶಗಳ ವಿಸ್ತರಣೆ) ಕಾಯ್ದೆ, 19966 ಅಥವಾ ಪೀಸಾ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಲಾಗಿದೆ.
ಗಣಿಗಾರಿಕೆಗೆ ಅನುಮತಿ ಪಡೆಯಲು ನಕಲಿ ಗ್ರಾಮಸಭೆ ನಿರ್ಣಯಗಳನ್ನು ಗಣಿಗಾರಿಕೆ ಕಂಪನಿಯು ಬಳಸಿಕೊಂಡಿರುವುದರ ಕುರಿತು ತನಿಖೆ ನಡೆಸುವಂತೆ ಮಾಜಿ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದರು ಎಂದು ಶುಕ್ಲಾ ಉಲ್ಲೇಖಿಸುತ್ತಾರೆ. ಆದರೆ, ಅದಕ್ಕೂ ಮುನ್ನ ಪೊಲೀಸರ ರಕ್ಷಣೆಯಲ್ಲಿ ಮರಗಳ ಕಡಿಯುವಿಕೆಯು ಪ್ರಾರಂಭಗೊಂಡಿದೆ.
ವಿವಾದಿತ ಅರಣ್ಯವು ಸೂರಜ್ ಪುರ್, ಸುರ್ಗುಜ ಹಾಗೂ ಕೋಬ್ರಾ ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಇದರಿಂದ ಸರ್ಕಾರದ ಬೆಂಬಲವಿರುವ ಕಾರ್ಪೊರೇಟ್ ಗಣಿಗಾರಿಕೆ ಕುಳಗಳು ಹಾಗೂ ಗಣಿಗಾರಿಕೆ ವಿರೋಧಿ ಆದಿವಾಸಿಗಳು ಮತ್ತು ಪರಿಸರವಾದಿಗಳ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ. 2015ರಲ್ಲಿ, ಛತ್ತೀಸ್ ಗಢದ ಎರಡು ಯೋಜನೆಗಳಲ್ಲಿ ರೂ. 25,000 ಕೋಟಿಗೂ ಹೆಚ್ಚು ಹೂಡಿಕೆ ಮಾಡಲು ಯೋಜಿಸಿದ್ದೇನೆ ಎಂದು ಅದಾನಿ ಗುಂಪು ಹೇಳಿತ್ತು. ಈ ಯೋಜನೆಗಳು ಬಹು ಇಂಧನ ಉತ್ಪಾದನಾ ಸೌಲಭ್ಯಕ್ಕೆ ಕಲ್ಲಿದ್ದಲು ಬಳಕೆ ಹಾಗೂ ಅಕ್ಕಿ ಹೊಟ್ಟು ದ್ರಾವಣ ಹೊರತೆಗೆಯುವ ಘಟಕ ಹಾಗೂ ತೈಲ ಸಂಸ್ಕರಣ ಘಟಕವನ್ನು ಈ ಯೋಜನೆಗಳು ಒಳಗೊಂಡಿದ್ದವು. ಈ ಹಿಂದಿನ ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಗೆ ಗಣಿಗಾರಿಕೆ ಹಾಗೂ ಕಲ್ಲಿದ್ದಲು ಪೂರೈಕೆಗೆ ಅನುಮತಿ ನೀಡಿದ್ದಕ್ಕೆ ಟೀಕೆಗಳು ಕೇಳಿ ಬಂದಿದ್ದರಿಂದ, ಛತ್ತೀಸ್ ಗಢ ವಿಧಾನಸಭೆಯು ಹಸ್ದಿಯೊ ಅರಣ್ಯವನ್ನು ಗಣಿಗಾರಿಕೆ ಮುಕ್ತ ಲೆಮ್ರು ಆನೆ ಮೀಸಲು ಅರಣ್ಯವೆಂದು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿತ್ತು. ಹಸ್ದಿಯೊ ನದಿ ತೀರ ಹಾಗೂ ಆ ಪ್ರದೇಶದಲ್ಲಿನ ಜೀವ ವೈವಿಧ್ಯದ ಮೇಲೆ ಅರಣ್ಯ ನಾಶವು ಪ್ರತಿಕೂಲ ಪರಿಣಾಮ ಬೀರುತ್ತದೆ ಹಾಗೂ ತಮ್ಮ ದೈನಂದಿನ ಬದುಕಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ನ ಗಣಿಗಾರಿಕೆ ಯೋಜನೆಯು ಹಲವಾರು ದಶಕಗಳಿಂದ ವಿವಾದಕ್ಕೀಡಾಗಿದೆ. ಕೆಲವು ಭಾಗಗಳಲ್ಲಿ ತನ್ನ ಕಲ್ಲಿದ್ದಲು ಗಣಿಗಾರಿಕೆಯು ತಾಂತ್ರಿಕ ತೊಂದರೆ ಅನುಭವಿಸಿದ್ದರೂ, ಛತ್ತೀಸ್ ಗಢದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಕಲ್ಲಿದ್ದಲು ಗಣಿಗಾರಿಕೆಯನ್ನು ನಡೆಸಲು ಅದಾನಿ ಸಮೂಹ ತೀವ್ರ ಪ್ರಯತ್ನದಲ್ಲಿ ತೊಡಗಿದೆ ಎಂದು ವರದಿಗಳು ಹೇಳುತ್ತಿವೆ. ಈ ಸಮೂಹವು ಛತ್ತೀಸ್ ಗಢದಲ್ಲಿ 3.7 ಬಿಲಿಯನ್ ಟನ್ ಕಲ್ಲಿದ್ದಲು ಗಣಿಗಾರಿಕೆ ನಡೆಸುವ ಗುರಿ ಹೊಂದಿದೆ ಎಂದು ಹೇಳಲಾಗಿದೆ.
ಗಮನಾರ್ಹ ಸಂಗತಿಯೆಂದರೆ, ಹಸ್ದಿಯೊ ಅರಣ್ಯ ಪ್ರದೇಶಕ್ಕೆ ಸಂಬಂಧಿಸಿದ ಗಣಿಗಾರಿಕೆಗೆ ಸಂಬಂಧಿಸಿದಂತೆ ಜುಲೈ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿರುವ ಛತ್ತೀಸ್ ಗಢ ಸರ್ಕಾರವು, ಹೊಸ ಗಣಿಗಾರಿಕೆ ಮೀಸಲು ಪ್ರದೇಶಗಳನ್ನು ಹಂಚಿಕೆ ಮಾಡುವ ಯಾವುದೇ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದೆ.
ರಾಜಕೀಯ ಕೆಸರೆರಚಾಟ
ಅಧಿಕೃತ ದತ್ತಾಂಶಗಳ ಪ್ರಕಾರ, 2022ರಲ್ಲಿ 41 ಹೆಕ್ಟೇರ್ ಪ್ರದೇಶದಲ್ಲಿನ ಮರಗಳನ್ನು ಕೆಡವಲಾಗಿದೆ ಹಾಗೂ ನವೆಂಬರ್ 2023ರಲ್ಲಿ 93 ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಹೆಚ್ಚುವರಿ ಪರವಾನಗಿಯನ್ನು ನೀಡಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಗಳೆರಡೂ ಗಣಿಗಾರಿಕೆಗೆ ಸಂಬಂಧಿಸಿದ ಅರಣ್ಯ ನಾಶವನ್ನು ತಾವು ವಿರೋಧ ಪಕ್ಷವಾಗಿದ್ದಾಗ ಪರಸ್ಪರ ಟೀಕಿಸಿವೆ.
ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ‘ಮೋದಿ ಕಿ ಗ್ಯಾರಂಟಿ 2023’ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಭರವಸೆ ನೀಡಿದ್ದ ಬಿಜೆಪಿಯು, ರಾಜಸ್ಥಾನ ಸರ್ಕಾರವು ಪಾರ್ಸಾ ಪೂರ್ವ ಹಾಗೂ ಛತ್ತೀಸ್ ಗಢ ಸರ್ಕಾರವು ಕಾಂತ ಬಸನ್ ವಲಯದಲ್ಲಿ ನೀಡಿರುವ ಮೋಸದ ಅನುಮತಿಯನ್ನು ಟೀಕಿಸಿದ್ದವು.
ಕಲ್ಲಿದ್ದಲು ಹಗರಣದ ಕುರಿತು ವಿಸ್ತೃತ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಗಣಿಗಾರಿಕೆ ಮಂಜೂರಾತಿಯನ್ನು ತೆಗೆದು ಹಾಕಿದ್ದರೂ, ಪಿಇಕೆಬಿ ಹಂತ 2ರ ಗಣಿಗಾರಿಕೆ ಯೋಜನೆಗಳಿಗಾಗಿ 2022ರ ಫೆಬ್ರವರಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಗಣಿಗಾರಿಕೆ ಪ್ರದೇಶವನ್ನು ಮರು ಮಂಜೂರು ಮಾಡಿದೆ. ಗಣಿಗಾರಿಕೆಯ ಬಗ್ಗೆ ಎರಡು ಅಧ್ಯಯನಗಳು ನಡೆದಿದೆ. ಹಸ್ದಿಯೊ ಆರಂದ್ ಬಚಾವೊ ಸಂಘರ್ಷ್ ಸಮಿತಿಯ ಹೆಸರಿನಲ್ಲಿ ಸ್ಥಳೀಯ ನಿವಾಸಿಗಳು ದೀರ್ಘಕಾಲದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಎರಡು ಅಧ್ಯಯನಗಳನ್ನು ಆಧರಿಸಿ ಎಪ್ರಿಲ್ 2023ರಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿರುವ ಶ್ರೀವಾಸ್ತವ, “ಹಸ್ದಿಯೊದಂತಹ ಅರಣ್ಯಗಳು ಬೆಲೆ ಬಾಳುವ ಇಂಗಾಲದ ನಿಕ್ಷೇಪಗಳು. ಭಾರತದ ಶೇ. 85ರಷ್ಟು ಕಲ್ಲಿದ್ದಲು ನಿಕ್ಷೇಪಗಳು ದಟ್ಟ ಅರಣ್ಯಗಳಿಂದ ಹೊರಗಿರುವಾಗಲೂ ಇಂತಹ ಜೀವ ವೈವಿಧ್ಯ ಹೊಂದಿರುವ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ನೀಡುವುದು ಮಾನಸಿಕ ಭ್ರಷ್ಟತೆಯ ಸೂಚಕವಾಗಿದೆ” ಎಂದು ವಾದಿಸಿದ್ದಾರೆ.
ಸೌಜನ್ಯ: Frontline