ದೇಶದಲ್ಲಿ ಹುಲಿಗಳ ಸಂಖ್ಯೆ 3,682ಕ್ಕೆ ಏರಿಕೆ
ಹೊಸದಿಲ್ಲಿ: 2006ರಲ್ಲಿ 1411ರಷ್ಟಿದ್ದ ಹುಲಿಗಳ ಸಂಖ್ಯೆಯು 2022ರಲ್ಲಿ 3682ಕ್ಕೇರಿದೆ ಎಂದು ಕೇಂದ್ರ ಸರಕಾರವು ಸೋಮವಾರ ಲೋಕಸಭೆಗೆ ತಿಳಿಸಿದೆ.
ಕೇಂದ್ರ ಸಾಂಸ್ಕೃತಿಕ ಸಚಿವ ಕಿಶನ್ ರೆಡ್ಡಿ ಅವರು ಸೋಮವಾರ ಲೋಕಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ. ನಿರ್ದಿಷ್ಟ ಪಕ್ಷಿ, ಹೂವು, ಪ್ರಾಣಿ ಇತ್ಯಾದಿಗಳನ್ನು ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಹೂ, ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆಯೇ ಹಾಗೂ ದೇಶದ ಜನಸಾಮಾನ್ಯರ ಭಾವನೆಗಳನ್ನು ಗಮನದಲ್ಲಿರಿಸಿಕೊಂಡು ಅವುಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆಯೇ ಎಂಬ ಪ್ರಶ್ನೆಯನ್ನು ರೆಡ್ಡಿ ಅವರಲ್ಲಿ ಕೇಳಲಾಗಿತ್ತು.
ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಇಲಾಖೆಯ ಮಾಹಿತಿಯಂತೆ, ಭಾರತ ಸರಕಾರವು 2011ರ ಮೇ ತಿಂಗಳಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಹಾಗೂ ನವಿಲನ್ನು ‘ರಾಷ್ಟ್ರೀಯ ಪಕ್ಷಿ’ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
1972ರ ವನ್ಯಜೀವಿ (ರಕ್ಷಣೆ) ಕಾಯ್ದೆಯ ಶೆಡ್ಯೂಲ್-I ರಲ್ಲಿ ಹುಲಿ ಹಾಗೂ ನವಿಲನ್ನು ಸೇರ್ಪಡೆಗೊಳಿಸಲಾಗಿದ್ದು ಅವುಗಳಿಗೆ ಬೇಟೆಯಿಂದ ಗರಿಷ್ಠ ಪ್ರಮಾಣದ ರಕ್ಷಣೆಯನ್ನು ಒದಗಿಸಲಾಗಿದೆ. ಇದರ ಜೊತೆಗೆ ಈ ವನ್ಯಜೀವಿಗಳ ಆವಾಸ ಸ್ಥಾನಗಳನ್ನು ಸಂರಕ್ಷಿತ ಪ್ರದೇಶಗಳೆಂದು ಘೋಷಿಸಲಾಗಿದೆ ಎಂದು ಸಚಿವರು ತಿಳಿಸಿದರು.