ಮಹುವಾ ಮೊಯಿತ್ರಾ ಪ್ರಕರಣ: ಅಂತರ ಕಾಯ್ದುಕೊಂಡ ತೃಣಮೂಲ ಕಾಂಗ್ರೆಸ್
ಕೋಲ್ಕತ್ತಾ: ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿರುವ ತನ್ನ ಸಂಸದೆ ಮಹುವಾ ಮೊಯಿತ್ರಾ ಸುತ್ತಲಿನ ವಿವಾದದಿಂದ ಅಂತರ ಕಾಯ್ದುಕೊಳ್ಳಲು ತೃಣಮೂಲ ಕಾಂಗ್ರೆಸ್ ಪಕ್ಷವು ನಿರ್ಧರಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಹುವಾ ಮೊಯಿತ್ರಾ ಲಂಚ ಪಡೆದು ಗೌತಮ್ ಅದಾನಿಯವರ ಅದಾನಿ ಸಮೂಹದ ಕುರಿತು ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ್ದರು ಎಂದು ಹಿರಾನಂದನಿ ಸಮೂಹದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದರ್ಶನ್ ಹಿರಾನಂದನಿ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಕುನಾಲ್ ಘೋಷ್, “ಈ ವಿಷಯದ ಕುರಿತು ಹೇಳಲು ಪಕ್ಷಕ್ಕೇನೂ ಉಳಿದಿಲ್ಲ. ಯಾರ ವಿರುದ್ಧ ಈ ವಿವಾದ ಸುತ್ತುವರಿದಿದೆಯೊ ಅವರೇ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಲು ಸೂಕ್ತ ವ್ಯಕ್ತಿ” ಎಂದು ಹೇಳಿದ್ದಾರೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಮತ್ತೊಬ್ಬ ಟಿಎಂಸಿ ನಾಯಕರ ಪ್ರಕಾರ, ಪಕ್ಷದ ನಾಯಕತ್ವಕ್ಕೆ ಈ ವಿವಾದದಲ್ಲಿ ತಲೆ ಹಾಕಲು ಇಷ್ಟವಿಲ್ಲ. ಹೀಗಾಗಿ ಪಕ್ಷವು ಈ ವಿವಾದದಿಂದ ಅಂತರ ಕಾಯ್ದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.