ವನ್ಯಮೃಗದ ದಾಳಿಗೆ ಇಬ್ಬರು ಮಕ್ಕಳು ಬಲಿ; ಕಟ್ಟೆಚ್ಚರ ವಹಿಸುವಂತೆ ಗ್ರಾಮಸ್ಥರಿಗೆ ಅರಣ್ಯಾಧಿಕಾರಿಗಳ ಸೂಚನೆ

Update: 2023-09-09 16:39 GMT

ಸಾಂದರ್ಭಿಕ ಚಿತ್ರ.| Photo: PTI

ಲಖೀಂಪುರ ಖೇರಿ (ಉ.ಪ್ರ.): ವನ್ಯಮೃಗವೊಂದು ಇಬ್ಬರು ಮಕ್ಕಳನ್ನು ಕೊಂದುಹಾಕಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಶಾರದಾನಗರ ಅರಣ್ಯ ವಲಯ ಪ್ರದೇಶದಲ್ಲಿ ವಾಸಿಸುವ ಗ್ರಾಮಸ್ಥರಿಗೆ ಕಟ್ಟೆಚ್ಚರ ವಹಿಸುವಂತೆ ಅರಣ್ಯಾಧಿಕಾರಿಗಳು ಸೂಚಿಸಿದ್ದಾರೆ.

ಇನ್ನೂ ಗುರುತು ಪತ್ತೆಯಾಗದ ವನ್ಯಮೃಗವೊಂದರ ದಾಳಿ ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಮಕ್ಕಳನ್ನು ಏಕಾಂಗಿಯಾಗಿ ಹೊರಗೆಹೋಗಲು ಅವಕಾಶ ನೀಡಬಾರದು ಹಾಗೂ ಗ್ರಾಮಸ್ಥರು ಹೊಲಗಳಲ್ಲಿ ಕೆಲಸ ಮಾಡುವಾಗ ಧ್ವನಿವರ್ಧಕಗಳಲ್ಲಿ ಸಂಗೀತವನ್ನು ನುಡಿಸಬೇಕೆಂದು ದಕ್ಷಿಣ ಖೇರಿ ವಿಭಾಗೀಯ ಅರಣ್ಯಾಧಿಕಾರಿ ಸಂಜಯ್ ಬಿಸ್ವಾಲ್ ಎಚ್ಚರಿಕೆ ಸಂದೇಶದಲ್ಲಿ ತಿಳಿಸಿದ್ದಾರೆ.

ಒಂದು ವೇಳೆ ಗ್ರಾಮಸ್ಥರು ಈ ಕಾಡುಮೃಗವನ್ನು ಕಂಡಲ್ಲಿ, ಕೂಡಲೇ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದು ಬಿಸ್ವಾಲ್ ತಿಳಿಸಿದ್ದಾರೆ.

ಸೆಪ್ಟೆಂಬರ್ 1ರಂದು ಮುಕುಂದಪುರ ಗ್ರಾಮದಲ್ಲಿ ಏಳು ವರ್ಷದ ಬಾಲಕಿಯೊಬ್ಬಳ ಮೇಲೆ ವನ್ಯಮೃಗವೊಂದು ದಾಳಿ ನಡೆಸಿ, ಕೊಂದುಹಾಕಿತ್ತು. ಸೆಪ್ಟೆಂಬರ್ 1ರಂದು ಸಮೀಪದ ಖೈಯಾ ಗ್ರಾಮದಲ್ಲಿ 14 ವರ್ಷದ ಬಾಲಕನೊಬ್ಬ ಕಾಡು ಪ್ರಾಣಿಯ ದಾಳಿಯಿಂದ ಗಂಭೀರ ಗಾಯಗೊಂಡಿದ್ದು, ಮಾರನೆಯ ದಿನ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದನು.

ಈ ದಾಳಿಗಳನ್ನು ನಡೆಸಿದ ವನ್ಯಮೃಗವನ್ನು ಇನ್ನೂ ಗುರುತಿಸಲು ಸಾಧ್ಯವಾಗಿಲ್ಲವೆಂದು ದಕ್ಷಿಣ ಖೇರಿಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಖೇರಿ ಅರಣ್ಯ ಪ್ರದೇಶವು ಹುಲಿ, ಚಿರತೆಗಳು ಮಾತ್ರವಲ್ಲದೆ ತೋಳಗಳ ಆವಾಸಸ್ಥಾನವಾಗಿದೆ.

ವನ್ಯಮೃಗದ ದಾಳಿಯಿಂದ ಇಬ್ಬರು ಮೃತಪಟ್ಟ ಘಟನೆಗಳ ಬಳಿಕ ಹೊಲಗಳಲ್ಲಿ, ಗ್ರಾಮದ ರಸ್ತೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲು ಮತ್ತು ಅಲೆದಾಡುತ್ತಿರುವ ವನ್ಯಮೃಗದ ಹೆಜ್ಜೆಗುರುತುಗಳನ್ನು ಸಂಗ್ರಹಿಸಲು ಗಸ್ತುತಂಡಗಳನ್ನು ನಿಯೋಜಿಸಲಾಗಿದೆ ಎಂದು ಬಿಸ್ವಾಲ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News