ಸುಳ್ಳು ಶವಪರೀಕ್ಷೆ ವರದಿಗಳನ್ನು ನೀಡಿದ್ದಕ್ಕಾಗಿ ಜಮ್ಮು-ಕಾಶ್ಮೀರದ ಇಬ್ಬರು ವೈದ್ಯರ ವಜಾ

Update: 2023-06-23 16:29 GMT

ಸಾಂದರ್ಭಿಕ ಚಿತ್ರ |Photo : PTI

ಶ್ರೀನಗರ: ಶೋಪಿಯಾನ್ ಜಿಲ್ಲೆಯಲ್ಲಿ 2009ರಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದ ಇಬ್ಬರು ಮಹಿಳೆಯರ ಶವಪರೀಕ್ಷೆಗಳಲ್ಲಿ ಭಾಗಿಯಾಗಿದ್ದ ಇಬ್ಬರು ವೈದ್ಯರನ್ನು ಜಮ್ಮು-ಕಾಶ್ಮೀರ ಆಡಳಿತವು ಗುರುವಾರ ವಜಾಗೊಳಿಸಿದೆ. 2009, ಮೇ 30ರಂದು 19ರ ಹರೆಯದ ಯುವತಿ ಮತ್ತು ಆಕೆಯ 22ರ ಹರೆಯದ ಅತ್ತಿಗೆಯ ಶವಗಳು ಶೋಪಿಯಾನ್ ಜಿಲ್ಲೆಯ ರಂಬಿಯಾರಾ ಹೊಳೆಯಲ್ಲಿ ಪತ್ತೆಯಾಗಿದ್ದವು.

ಭದ್ರತಾ ಪಡೆಗಳ ಸಿಬ್ಬಂದಿಗಳು ಅವರ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಗಳು ಆರೋಪಿಸಿದ ಬಳಿಕ ಕಾಶ್ಮೀರದಲ್ಲಿ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಆದರೆ ಅವರಿಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಆಡಳಿತವು ಹೇಳಿತ್ತು.

ಇಬ್ಬರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ವೈದ್ಯರಾದ ನಿಘಾತ್ ಶಾಹೀನ್ ಚಿಲೂ ಮತ್ತು ಬಿಲಾಲ ಅಹ್ಮದ್ ದಲಾಯಿ ಮರಣೋತ್ತರ ಪರೀಕ್ಷಾ ವರದಿಗಳಲ್ಲಿ ದೃಢಪಡಿಸಿದ್ದರು. ಆದರೆ,ಅವರಿಬ್ಬರೂ ಪಾಕಿಸ್ತಾನದೊಂದಿಗೆ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದರು ಮತ್ತು ಸುಳ್ಳು ಮರಣೋತ್ತರ ಪರೀಕ್ಷೆ ವರದಿಯನ್ನು ಸಿದ್ಧಪಡಿಸಲು ಕಾಶ್ಮೀರದೊಳಗಿನ ಪಾಕ್ ಪರ ಶಕ್ತಿಗಳೊಂದಿಗೆ ಸಂಚು ರೂಪಿಸಿದ್ದರು ಎಂದು ಅಧಿಕಾರಿಗಳು ಹೇಳಿದ ಬಳಿಕ ಗುರುವಾರ ಈ ವೈದ್ಯರನ್ನು ಅಮಾನತು ಮಾಡಲಾಗಿದೆ ಎಂದು ಅಪರಿಚಿತ ಸರಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

2009ರಲ್ಲಿ ಉಮರ್ ಅಬ್ದುಲ್ಲಾ ನೇತೃತ್ವದ ಆಗಿನ ನ್ಯಾಷನಲ್ ಕಾನ್ಫರೆನ್ಸ್ ಸರಕಾರವು ನಿವೃತ್ತ ನ್ಯಾಯಾಧೀಶ ಮುಝಾಫ್ಫರ್ ಅಹ್ಮದ್ ಜಾನ್ ನೇತೃತ್ವದಲ್ಲಿ ವಿಚಾರಣಾ ಆಯೋಗವೊಂದನ್ನು ರಚಿಸಿತ್ತು.

ಶವಗಳು ಪತ್ತೆಯಾಗಿದ್ದ ಹೊಳೆಯಲ್ಲಿನ ಕಣಕಾಲು ಎತ್ತರದ ನೀರಿನಲ್ಲಿ ಯಾರಾದರೂ ಮುಳುಗಿ ಸಾಯುವುದು ಅಸಾಧ್ಯ ಎಂದು ಹೇಳಿದ್ದ ವಿಚಾರಣಾ ವರದಿಯು, ಪೊಲೀಸ್ ಅಧಿಕಾರಿಗಳು ಸಾಕ್ಷನಾಶದ ತಪ್ಪಿತಸ್ಥರಾಗಿದ್ದಾರೆ ಎಂದೂ ತಿಳಿಸಿತ್ತು. ಪ್ರಕರಣದಲ್ಲಿ ಹೊಸದಾಗಿ ತನಿಖೆ ನಡೆಸುವಂತೆ ವರದಿಯು ಶಿಫಾರಸು ಮಾಡಿತ್ತು.

2009, ಆಗಸ್ಟ್ ನಲ್ಲಿ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿದ್ದ ಸಿಬಿಐ, ಇಬ್ಬರು ಮಹಿಳೆಯರ ಅತ್ಯಾಚಾರ ಮತ್ತು ಕೊಲೆ ಆರೋಪಗಳನ್ನು ತಳ್ಳಿಹಾಕಿತ್ತು. ತನಿಖೆಯನ್ನು ತಪ್ಪುದಾರಿಗೆ ಎಳೆದಿದ್ದಕ್ಕಾಗಿ ಹಾಗೂ ಅತ್ಯಾಚಾರ ಮತ್ತು ಕೊಲೆಯ ಸುಳ್ಳು ಸಾಕ್ಷಗಳನ್ನು ಸೃಷ್ಟಿಸಿದ್ದಕ್ಕಾಗಿ ಇಬ್ಬರು ವೈದ್ಯರು ಸೇರಿದಂತೆ 13 ಜನರ ವಿರುದ್ಧ ಸಿಬಿಐ 2009, ಡಿಸೆಂಬರ್ ನಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು.

ಮಹಿಳೆಯರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂಬ ನಿರ್ಧಾರಕ್ಕೆ ಬಂದಿದ್ದ ಸಿಬಿಐ, ಭದ್ರತಾಪಡೆಗಳನ್ನು ಆರೋಪ ಮುಕ್ತಗೊಳಿಸಿತ್ತು.

ಬಡ್ಗಾಮ್ ನ ಉಪ ಜಿಲ್ಲಾ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞರಾಗಿರುವ ಚಿಲೂ ಮತ್ತು ಶೋಪಿಯಾನ್ನ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ವೈದ್ಯಾಧಿಕಾರಿಯಾಗಿರುವ ದಲಾಲ್ ಅವರ ವಜಾ ಆದೇಶವನ್ನು ಲೆಫ್ಟಿನಂಟ್ ಗವರ್ನರ್ ಅನುಮೋದಿಸಿದ್ದಾರೆ ಎಂದು ಜಮ್ಮು-ಕಾಶ್ಮೀರದ ಸಾಮಾನ್ಯ ಆಡಳಿತ ವಿಭಾಗವು ಗುರುವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News