ಯೂನಿಯನ್ ಕಾರ್ಬೈಡ್ ತ್ಯಾಜ್ಯ ವಿಲೇವಾರಿ | ವೈದ್ಯರ ಬಳಿಕ, ಇಂದೋರ್ ಮೇಯರ್ ರಿಂದ ವಿರೋಧ
ಭೋಪಾಲ : ಮಧ್ಯಪ್ರದೇಶದ ಧಾರ್ ಜಿಲ್ಲೆಯ ಪಿತಾಂಪುರ ಕೈಗಾರಿಕೆ ಪ್ರದೇಶದಲ್ಲಿ ಭೋಪಾಲದ ಮುಚ್ಚಿದ ಯೂನಿಯನ್ ಕಾರ್ಬೈಡ್/ಡವ್ ಕೆಮಿಕಲ್ ಘಟಕದ ವಿಷಕಾರಿ ತ್ಯಾಜ್ಯ ವಿಲೇವಾರಿಯ ಸರಕಾರದ ಯೋಜನೆಗೆ ದಿನದಿಂದ ದಿನಕ್ಕೆ ವಿರೋಧ ಹೆಚ್ಚಾಗುತ್ತಿದೆ.
ಈ ವಿರೋಧದ ಧ್ವನಿಗೆ ಇಂದೋರ್ನ ಮೇಯರ್ ಹಾಗೂ ಬಿಜೆಪಿ ನಾಯಕ ಪುಷ್ಯಮಿತ್ರ ಭಾರ್ಗವ್ ಸೇರಿದ್ದಾರೆ. ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಅವರು ಸರಕಾರದಲ್ಲಿ ಮನವಿ ಮಾಡಿದ್ದಾರೆ. ಈ ಹಿಂದೆ ಗುಜರಾತ್ನಲ್ಲಿ ತ್ಯಾಜ್ಯವನ್ನು ಸುಟ್ಟು ಹಾಕುವ ಪ್ರಯತ್ನವನ್ನು ನಿಲ್ಲಿಸಿರುವುದು ಹಾಗೂ ಅನಂತರ ಅದನ್ನು ವಿಲೇವಾರಿಗೆ ಜರ್ಮನಿಗೆ ಕೊಂಡೊಯ್ದಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ 2024 ಡಿಸೆಂಬರ್ 3ರ ಆದೇಶವನ್ನು ಅವರು ಅನುಸರಿಸಿದ್ದಾರೆ ಎಂದು ಮಾಜಿ ಹೆಚ್ಚುವರಿ ಎಡ್ವೋಕೇಟ್ ಜನರಲ್ ಭಾರ್ಗವ್ ಪ್ರತಿಪಾದಿಸಿದ್ದಾರೆ. ಆದರೆ, ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಕಾರ್ಯದರ್ಶಿ (ಭೋಪಾಲ್ ಅನಿಲ ದುರಂತ ಪರಿಹಾರ ಹಾಗೂ ಪುನರ್ವಸತಿ ಇಲಾಖೆ) ಉಚ್ಚ ನ್ಯಾಯಾಲಯದಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ. ಈ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮುನ್ನ ಪಿತಾಂಪುರದ ಜನರ ಒಪ್ಪಿಗೆಯನ್ನು ಪಡೆಯುವುದು ಅಗತ್ಯ ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸುರಕ್ಷೆ, ಭದ್ರತೆ ಖಾತರಿ ಹಾಗೂ ಪುನರ್ವಸತಿಯ ಯೋಜನೆಗಳಿಲ್ಲದ ತ್ಯಾಜ್ಯ ವಿಲೇವೇರಿ ಮಾಡುವ ವಿರುದ್ಧ ಎಂಜಿಎಂ ವೈದ್ಯಕೀಯ ಕಾಲೇಜಿನ ಮಾಜಿ ವಿದ್ಯಾರ್ಥಿಗಳು ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಈ ಕಾರ್ಯಾಚರಣೆ ಅಸಂಖ್ಯಾತ ಜನರ ಸಾವಿಗೆ ಕಾರಣವಾಗಬಹುದು ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ವಿಲೇವಾರಿ ಮಾಡುವ ಇತ್ತೀಚೆಗಿನ ಯೋಜನೆ ಇಂದೋರ್ ಜನರ ನೀರಿನ ಶೇ. 30 ಅವಶ್ಯಕತೆಯನ್ನು ಈಡೇರಿಸುವ ಗಂಭೀರ್ ನದಿ ಹಾಗೂ ಯಶ್ವಂತ್ ಸಾಗರ್ ಅಣೆಕಟ್ಟು/ಸರೋವರ ಕಲುಷಿತಗೊಳ್ಳುವ ಸಾಧ್ಯತೆ ಇದೆ ಎಂದು ಅವರ ವಕೀಲ ಅಭಿನವ್ ಪಿ.ದನೋಧ್ಕರ್ ತಿಳಿಸಿದ್ದಾರೆ.
ಈ ನಡುವೆ ರಾಜ್ಯ ಸರಕಾರ ತ್ಯಾಜ್ಯವನ್ನು ಸಾಗಾಟ ಹಾಗೂ ವಿಲೇವಾರಿ ಮಾಡುವ ಕಾರ್ಯವನ್ನು ಮುಂದುವರಿಸಿದೆ. ಅಪಾಯದ ಆತಂಕವನ್ನು ನಿರಾಕರಿಸಿದ ಭೋಪಾಲ್ ಅನಿಲ ದುರಂತ ಹಾಗೂ ಪುನರ್ವಸತಿ ಇಲಾಖೆಯ ನಿರ್ದೇಶಕ ಸ್ವತಂತ್ರ ಕುಮಾರ್ ಸಿಂಗ್, ಈ ಪ್ರಕ್ರಿಯೆ ಜನವರಿ 3ರ ಮುನ್ನ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.