ಉತ್ತರಾಖಂಡ: ಭಾರೀ ಮಳೆಗೆ ಬಂಡೆಗಳು ಉರುಳಿಬಿದ್ದು ಮೂರು ವಾಹನ ಜಖಂ, ನಾಲ್ವರು ಮೃತ್ಯು
Update: 2023-07-11 07:09 GMT
ಹೊಸದಿಲ್ಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ಭಾರೀ ಮಳೆಯ ನಡುವೆ ಬೆಟ್ಟಗಳಿಂದ ಬಂಡೆಗಳು ಉರುಳಿಬಿದ್ದು ಮೂರು ವಾಹನಗಳು ಜಖಂಗೊಂಡ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಯಾತ್ರಾರ್ಥಿಗಳ ತಂಡ ಉತ್ತರಾಖಂಡದ ಗಂಗೋತ್ರಿಯಲ್ಲಿ ತೀರ್ಥಯಾತ್ರೆ ಮುಗಿಸಿ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದಾಗ ನಿನ್ನೆ ಸಂಜೆ ಈ ಘಟನೆ ನಡೆದಿದೆ. ಸುಮಾರು 30 ಮಂದಿ ಪ್ರಯಾಣಿಕರಿದ್ದ ಮೂರು ವಾಹನಗಳು ಗುಡ್ಡದ ಪಕ್ಕದ ರಸ್ತೆಯಲ್ಲಿ ಸಾಗುತ್ತಿದ್ದಾಗ ಬಂಡೆಕಲ್ಲುಗಳು ಉರುಳಿಬಿದ್ದು ವಾಹನಗಳ ಮೇಲೆ ಬಿದ್ದಿವೆ.
ಮೃತರಲ್ಲಿ ಮಹಿಳೆಯೊಬ್ಬರು ಸೇರಿದ್ದು, ಗಾಯಗೊಂಡವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ. ಮೃತಪಟ್ಟವರೆಲ್ಲರೂ ಮಧ್ಯಪ್ರದೇಶದ ಇಂದೋರ್ ನವರು ಎಂದು ತಿಳಿದುಬಂದಿದೆ.
ವಾಹನಗಳ ಸುಕ್ಕುಗಟ್ಟಿದ ಅವಶೇಷಗಳು ಅಪಘಾತದ ತೀವ್ರತೆಯನ್ನು ವಿವರಿಸುತ್ತವೆ. ಚಿಕ್ಕ ಬಸ್ ನ ಒಂದು ಬದಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಇನ್ನೆರಡು ಚಿಕ್ಕ ವಾಹನಗಳಿಗೂ ಭಾರೀ ಹಾನಿಯಾಗಿದೆ.