ದೇವಳಕ್ಕೆ ಡೋಲು ಬಾರಿಸಲು ಓರ್ವ ಆಗಮಿಸಿಲ್ಲ ಎಂದು ಇಡೀ ಗ್ರಾಮದ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹೇರಿದ ಪಂಚಾಯತ್
ಗೋಪೇಶ್ವರ್: ಉತ್ತರಾಖಂಡದ ಚಮೋಲಿ ಜಿಲ್ಲೆಯ ಸುಭೈ ಎಂಬ ಗ್ರಾಮದ ದಲಿತ ಸಮುದಾಯದ ವ್ಯಕ್ತಿ ಅನಾರೋಗ್ಯದ ಕಾರಣ ದೇವಸ್ಥಾನವೊಂದಕ್ಕೆ ಡೋಲು ಬಾರಿಸಲು ಆಗಮಿಸಲು ವಿಫಲವಾಗಿದ್ದಾನೆಂಬ ಒಂದೇ ಕಾರಣಕ್ಕೆ ಇಡೀ ಗ್ರಾಮದ ದಲಿತ ಕುಟುಂಬಗಳಿಗೆ ಸ್ಥಳೀಯ ಪಂಚಾಯತ್ ಬಹಿಷ್ಕಾರ ಹೇರಿದ ಘಟನೆ ವರದಿಯಾಗಿದೆ.
ಭಾರತ-ಚೀನಾ ಗಡಿ ಸಮೀಪದ ನೀತಿ ಕಣಿವೆಯಲ್ಲಿರುವ ಈ ಗ್ರಾಮದಲ್ಲಿ ಸುಮಾರು ಒಂದು ಡಜನ್ ದಲಿತ ಕುಟುಂಬಗಳಿದ್ದು ಗ್ರಾಮದ ದೇವಸ್ಥಾನ, ಧಾರ್ಮಿಕ ಮತ್ತು ಸಾಂಸ್ಕೃತಿ ಸಮಾರಂಭಗಳಲ್ಲಿ ತಲೆತಲಾಂತರದಿಂದ ಡೋಲು ಬಾರಿಸುವ ಸಂಪ್ರದಾಯ ಹೊಂದಿವೆ.
ಆದರೆ ಅನಾರೋಗ್ಯದ ಕಾರಣದಿಂದ ಪುಷ್ಕರ್ ಲಾಲ್ ಎಂಬಾತ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಡೋಲು ಬಾರಿಸಲು ಆಗಮಿಸದೇ ಇದ್ದಾಗ ಸ್ಥಳೀಯ ಪಂಚಾಯತ್ ಇಡೀ ದಲಿತ ಸಮುದಾಯಕ್ಕೆ ಬಹಿಷ್ಕಾರ ಹೇರಿದೆ.
ಪಂಚಾಯತ್ ಸದಸ್ಯನೊಬ್ಬ ಬಹಿಷ್ಕಾರ ಘೋಷಿಸುವ ವೀಡಿಯೋವೊಂದೂ ಹರಿದಾಡುತ್ತಿದೆ ಹಾಗೂ ಆದೇಶ ಪಾಲಿಸಲು ವಿಫಲವಾದರೆ ಇಂತಹುದೇ ಪರಿಣಾಮ ಎದುರಿಸಬೇಕಿದೆ ಎಂದು ಆತ ಎಚ್ಚರಿಸುವುದೂ ಕೇಳಿಸುತ್ತದೆ.
ಈ ಬಹಿಷ್ಕಾರದ ಭಾಗವಾಗಿ ದಲಿತ ಕುಟುಂಬಗಳು ಅರಣ್ಯ, ಜಲ ಸಂಪನ್ಮೂಲಗಳನ್ನು ಬಳಸುವಂತಿಲ್ಲ, ಅಂಗಡಿಗಳಿಂದ ಆಗತ್ಯ ವಸ್ತುಗಳನ್ನು ಖರೀದಿಸುವಂತಿಲ್ಲ, ವಾಹನಗಳಲ್ಲಿ ಸಾಗುವಂತಿಲ್ಲ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡುವಂತಿಲ್ಲ.
ಈ ಬಹಿಷ್ಕಾರ ಆದೇಶದ ಹಿಂದೆ ರಾಮಕೃಷ್ಣ ಖಂಡಲ್ವಾಲ್ ಮತ್ತು ಯಶ್ವೀರ್ ಸಿಂಗ್ ಎಂಬವರು ಇದ್ದಾರೆಂದು ಆರೋಪಿಸಿ ಸಂತ್ರಸ್ತರ ಕುಟುಂಬಗಳು ಆರೋಪಿಸಿವೆ.