ನೀತಿ ಸಂಹಿತೆ ಉಲ್ಲಂಘನೆ: ಸಂಜು ಸ್ಯಾಮ್ಸನ್‌ಗೆ ದಂಡ

Update: 2024-05-08 16:24 GMT

ಸಂಜು ಸ್ಯಾಮ್ಸನ್ | PC ; X 

ಹೊಸದಿಲ್ಲಿ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ತನ್ನ ತಂಡ 20 ರನ್‌ನಿಂದ ಸೋತಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಪರಿಣಾಮವಾಗಿ ಸ್ಯಾಮ್ಸನ್‌ಗೆ ಪಂದ್ಯ ಶುಲ್ಕದಲ್ಲಿ ಶೇ.30ರಷ್ಟು ದಂಡ ವಿಧಿಸಲಾಗಿದೆ.

ರಾಜಸ್ಥಾನ ತಂಡ ಮಂಗಳವಾರ ನಡೆದ ಪಂದ್ಯದಲ್ಲಿ ಗೆಲ್ಲಲು 222 ರನ್ ಬೆನ್ನಟ್ಟುತ್ತಿದ್ದಾಗ ಸ್ಯಾಮ್ಸನ್ 86 ರನ್ ಗಳಿಸಿದ್ದರು. ಅವರು ನಿರ್ದಿಷ್ಟವಾಗಿ ಯಾವ ನಿಯಮ ಉಲ್ಲಂಘಿಸಿದ್ದಾರೆಂದು ಸ್ಪಷ್ಟಪಡಿಸಿಲ್ಲ. ಆದರೆ ಅವರು 16ನೇ ಓವರ್‌ನಲ್ಲಿ ಬೌಂಡರಿಲೈನ್‌ನಲ್ಲಿ ಶಾಯ್ ಹೋಪ್‌ಗೆ ಕ್ಯಾಚ್ ನೀಡಿ ನಿರ್ಗಮಿಸುತ್ತಿದ್ದಾಗ ಕ್ಯಾಚಿಗೆ ಸಂಬಂಧಿಸಿ ಅಂಪೈರ್‌ರೊಂದಿಗೆ ವಾದಿಸಿದ್ದಕ್ಕೆ ದಂಡ ವಿಧಿಸಲಾಗಿದೆ ಎನ್ನಲಾಗಿದೆ.

ಚೆಂಡನ್ನು ಲಾಂಗ್‌ಆನ್‌ನಲ್ಲಿ ಕ್ಯಾಚ್ ಪಡೆದ ವೇಳೆ ಬೌಂಡರಿಲೈನ್‌ಗೆ ಹೋಪ್ ಅವರ ಕಾಲು ತಾಗಿಸದಿರುವುದನ್ನು ಮರು ಪರಿಶೀಲಿಸಿದ ನಂತರ 3ನೇ ಅಂಪೈರ್ ಔಟ್ ತೀರ್ಪು ನೀಡಿದ್ದರು. ಮೂರನೇ ಅಂಪೈರ್ ನಿರ್ಧಾರಕ್ಕೆ ಸ್ಯಾಮ್ಸನ್ ಅಸಮಾಧಾನ ಹೊರ ಹಾಕಿದ್ದಾರೆ. ಪೆವಿಲಿಯನ್‌ಗೆ ವಾಪಸಾಗುತ್ತಿದ್ದಾಗ ಆನ್‌ಫೀಲ್ಡ್ ಅಂಪೈರ್‌ರೊಂದಿಗೆ ಔಟ್ ಕುರಿತು ಮಾತನಾಡಿದ್ದಾರೆ.

ಸ್ಯಾಮ್ಸನ್ ಐಪಿಎಲ್ ನೀತಿ ಸಂಹಿತೆಯ 2.8ನೇ ವಿಧಿಯನ್ನು ಸ್ಯಾಮ್ಸನ್ ಉಲ್ಲಂಘಿಸಿದ್ದಾರೆ. ಅವರು ಮ್ಯಾಚ್ ರೆಫರಿಯ ತೀರ್ಪನ್ನು ಒಪ್ಪಿಕೊಂಡಿದ್ದಾರೆ. ನೀತಿ ಸಂಹಿತೆಯ ಲೆವೆಲ್-1ರ ಉಲ್ಲಂಘನೆಗೆ ಮ್ಯಾಚ್ ರೆಫರಿಗಳ ನಿರ್ಧಾರವೇ ಅಂತಿಮ ಎಂದು ಐಪಿಎಲ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಎಪ್ರಿಲ್ 10ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಜೈಪುರದಲ್ಲಿ ನಡೆದಿದ್ದ ಮುಖಾಮುಖಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ನಿಧಾನಗತಿಯ ಬೌಲಿಂಗ್ ಮಾಡಿದ್ದಕ್ಕೆ ಸ್ಯಾಮ್ಸನ್‌ಗೆ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News