ಮಹಾರಾಷ್ಟ್ರದಲ್ಲಿ ಬಾಲಕಿಯರು, ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳ: ಶರದ್ ಪವಾರ್ ಕಳವಳ

Update: 2024-08-23 15:34 GMT

ಶರದ್ ಪವಾರ್ | PC : PTI 

ಪುಣೆ: ಮಹಾರಾಷ್ಟ್ರದಲ್ಲಿ ಎಳೆಯ ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ ಹಾಗೂ ಇಂಥ ಅಪರಾಧಗಳನ್ನು ತಡೆಯಲು ಗೃಹ ಇಲಾಖೆಯು ಎಚ್ಚರವಾಗಿರಬೇಕು ಎಂಬುದಾಗಿ ಸಲಹೆ ನೀಡಿದ್ದಾರೆ.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬದ್ಲಾಪುರ ಘಟನೆಯನ್ನು ಪ್ರಸ್ತಾವಿಸಿ, ಶಾಲೆಯೊಂದರಲ್ಲಿ ಇಂಥ ಘಟನೆ ನಡೆದಿರುವುದು ಆಘಾತಕಾರಿಯಾಗಿದೆ ಎಂದು ಹೇಳಿದರು. ಬಳಿಕ, ಹೊರಗೆ ಈ ಅಪರಾಧಕ್ಕೆ ಸಾರ್ವಜನಿಕರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದರು ಎಂದರು.

ಬದ್ಲಾಪುರದಲ್ಲಿ ನಡೆದ ಪ್ರತಿಭಟನೆಯು ‘’ರಾಜಕೀಯ’’ ಎಂಬ ಮುಖ್ಯಮಂತ್ರಿ ಏಕನಾಥ್ ಶಿಂದೆಯ ಹೇಳಿಕೆಯನ್ನು ಅವರು ಖಂಡಿಸಿದರು.

‘‘ಇಂಥ ಕೃತ್ಯವೊಂದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾದ ಅಗತ್ಯವಿತ್ತು ಮತ್ತು ಪ್ರತಿಯೊಬ್ಬರೂ ಅದಕ್ಕಾಗಿಯೇ ಆಗ್ರಹಿಸಿದರು. ಇಂಥ ಘಟನೆಗಳು ನಡೆಯದಂತೆ ರಾಜ್ಯ ಸರಕಾರವು ನಿಗಾ ಇಡಬೇಕು. ಅಗತ್ಯ ಬಿದ್ದಾಗಲೆಲ್ಲ ಗೃಹ ಇಲಾಖೆಯು ಕಠಿಣ ಕ್ರಮ ತೆಗೆದುಕೊಳ್ಳಬೇಕು’’ ಎಂದು ಪವಾರ್ ಹೇಳಿದರು.

ಥಾಣೆ ಜಿಲ್ಲೆಯ ಬದ್ಲಾಪುರ ಪಟ್ಟಣದ ಶಾಲೆಯೊಂದರಲ್ಲಿ ಇಬ್ಬರು ನರ್ಸರಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಳಿಕವೂ ರಾಜ್ಯಾದ್ಯಂತ ಇಂಥದೇ ಇನ್ನೂ ಹಲವು ಅಪರಾಧಗಳು ವರದಿಯಾಗಿವೆ ಎಂದು ಪವಾರ್ ಹೇಳಿದರು.

‘‘ಸಣ್ಣ ಹುಡುಗಿಯರಾಗಿರಬಹುದು ಅಥವಾ ಮಹಿಳೆಯರಾಗಿರಬಹುದು, ಇಂಥ ಹಲವಾರು ದೌರ್ಜನ್ಯಗಳು ವರದಿಯಾಗಿವೆ. ದುರದೃಷ್ಟವಶಾತ್, ರಾಜ್ಯದಲ್ಲಿ ಇಂಥ ಘಟನೆಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆಗ ಜನರು ಅದಕ್ಕೆ ಪ್ರತಿಕ್ರಿಯಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಾರೆ. ಈ ಸಂಬಂಧ ಶನಿವಾರ ಒಂದು ದಿನದ ಬಂದ್ ಆಚರಿಸಲಾಗುತ್ತಿದೆ’’ ಎಂದು ಪವಾರ್ ತಿಳಿಸಿದರು.

ಬದ್ಲಾಪುರದ ಖಾಸಗಿ ಶಾಲೆಯೊಂದರ 4 ವರ್ಷದ ಇಬ್ಬರು ಬಾಲಕಿಯರ ಮೇಲೆ ಶಾಲೆಯ ಸ್ವಚ್ಛತಾ ಕೆಲಸಗಾರನೊಬ್ಬ ಶೌಚಾಲಯದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯನ್ನು ಶಾಲಾಡಳಿತದ ಗಮನಕ್ಕೆ ತಂದಾಗ ಅವರು ಪೊಲೀಸರೊಂದಿಗೆ ಶಾಮೀಲಾಗಿ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದು ಬಾಲಕಿಯರ ಹೆತ್ತವರು ಆರೋಪಿಸಿದ್ದಾರೆ. ದೂರು ದಾಖಲಿಸಲು ಹೋದ ಹೆತ್ತವರನ್ನು ಪೊಲೀಸರು ಠಾಣೆಯಲ್ಲಿ ಒಂಭತ್ತು ಗಂಟೆಗಳ ಕಾಲ ಕಾಯಿಸಿದರು ಎಂದು ಆರೋಪಿಸಲಾಗಿದೆ.

ಇದರಿಂದ ಸಿಡಿದೆದ್ದ ಶಾಲಾ ಮಕ್ಕಳ ಹೆತ್ತವರು ಸೇರಿದಂತೆ ಸಾವಿರಾರು ಮಂದಿ ಮಂಗಳವಾರ ಬದ್ಲಾಪುರ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ರೈಲುಗಳ ಸಂಚಾರವನ್ನು ತಡೆದರು.

ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಮತ್ತು ಆರೋಪಿಯು ಈಗ ಪೊಲೀಸರ ವಶದಲ್ಲಿದ್ದಾನೆ.

ಮೊಕದ್ದಮೆ ವಾಪಸ್ ತೆಗೆದುಕೊಳ್ಳಿ: ಮಹಾರಾಷ್ಟ್ರ ಸರಕಾರಕ್ಕೆ ಉದ್ಧವ್ ಠಾಕ್ರೆ ಒತ್ತಾಯ

ಬದ್ಲಾಪುರ ಪಟ್ಟಣದ ಖಾಸಗಿ ಶಾಲೆಯೊಂದರ ಇಬ್ಬರು ನರ್ಸರಿ ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದವರ ವಿರುದ್ಧದ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಮುಖ್ಯಸ್ಥ ಉದ್ಧವ್ ಠಾಕ್ರೆ ಶುಕ್ರವಾರ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಪ್ರಕರಣಗಳನ್ನು ವಾಪಸ್ ಪಡೆಯದಿದ್ದರೆ ಪ್ರತಿಪಕ್ಷಗಳು ರಸ್ತೆಗಿಳಿದು ಹೋರಾಟ ನಡೆಸುವುದು ಎಂಬುದಾಗಿ ಅವರು ಎಚ್ಚರಿಸಿದರು.

ಶನಿವಾರಕ್ಕೆ ಕರೆ ನೀಡಲಾಗಿರುವ ‘ಮಹಾರಾಷ್ಟ್ರ ಬಂದ್’ ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದ ಅವರು, ‘‘ವಿಕೃತಿ’’ಯ ವಿರುದ್ಧ ಬಂದ್ ನಡೆಸಲಾಗುತ್ತಿದೆ ಎಂದು ಹೇಳಿದರು. ಬಂದ್ನಲ್ಲಿ ಭಾಗವಹಿಸುವಂತೆ ಅವರು ಎಲ್ಲಾ ಜಾತಿ ಮತ್ತು ಧರ್ಮಗಳ ಜನರಿಗೆ ಮನವಿ ಮಾಡಿದರು. ಮಹಾರಾಷ್ಟ್ರದ ಜನರ ಪರವಾಗಿ ಬಂದ್ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಏಕನಾಥ್ ಶಿಂದೆ ಸರಕಾರ ನಡೆಸುತ್ತಿರುವ ದಮನ ಕಾರ್ಯಾಚರಣೆಯನ್ನು ಖಂಡಿಸಿದ ಠಾಕ್ರೆ, ಬದ್ಲಾಪುರದಲ್ಲಿ ಈಗಲೂ ಜನರನ್ನು ಬಂಧಿಸಲಾಗುತ್ತಿದೆ ಎಂದು ಹೇಳಿದರು. ‘‘ಪ್ರತಿಭಟನಾಕಾರರ ವಿರುದ್ಧದ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು, ಇಲ್ಲದಿದ್ದರೆ ನಾವು ರಸ್ತೆಗಿಳಿದು ಪ್ರತಿಭಟಿಸಬೇಕಾಗುತ್ತದೆ’’ ಎಂದು ಠಾಕ್ರೆ ಎಚ್ಚರಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News