ಸತ್ಯ ಶೋಧನಾ ಸಮಿತಿ ಸದಸ್ಯೆಯಾಗಿ ಮಣಿಪುರಕ್ಕೆ ಭೇಟಿ: ಮಹಿಳಾ ನ್ಯಾಯವಾದಿಯ ಬಂಧನಕ್ಕೆ ಸುಪ್ರೀಂ ತಡೆ

Update: 2023-07-11 16:31 GMT

ಸುಪ್ರೀಂ ಕೋರ್ಟ್ | Photo: PTI

ಹೊಸದಿಲ್ಲಿ:ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತ ಪರಿಶೀಲನೆ ನಡೆಸಲು ಅಲ್ಲಿಗೆ ತೆರಳಿದ್ದ ಸತ್ಯ ಶೋಧನಾ ಸಮಿತಿಯ ಸದಸ್ಯೆಯಾಗಿದ್ದ ಹಾಗೂ ತರುವಾಯ ಪತ್ರಿಕಾಗೋಷ್ಠಿ ನಡೆಸಿದ ಮಹಿಳಾ ನ್ಯಾಯವಾದಿಯ ಬಂಧನಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠದ ಮುಂದೆ ಹಾಜರಾದ ಹಿರಿಯ ನ್ಯಾಯವಾದಿ ಸಿದ್ಧಾರ್ಥ್ ದವೆ, ನ್ಯಾಯವಾದಿ ದೀಕ್ಷಾ ದ್ವಿವೇದಿ ಅವರು ದೇಶದ್ರೋಹದೊಂದಿಗೆ ಭಾರತದ ವಿರುದ್ಧ ಯುದ್ಧ ಸಾರಿದ ಹಾಗೂ ಇತರ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಆದುದರಿಂದ ಅರ್ಜಿಯ ತುರ್ತು ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಿದರು. ದೀಕ್ಷಾ ದ್ವಿವೇದಿ ಅವರು ಕಳೆದ ನಾಲ್ಕು ವರ್ಷಗಳಿಂದ ವಕೀಲರಾಗಿದ್ದಾರೆ. ಮಣಿಪುರಕ್ಕೆ ಭೇಟಿ ನೀಡಿದ ಹಾಗೂ ಅನಂತರ ಪತ್ರಿಕಾಗೋಷ್ಠಿ ನಡೆಸಿದ ಮೂವರು ಸದಸ್ಯರ ತಂಡದಲ್ಲಿ ಅವರು ಭಾಗಿಯಾಗಿದ್ದರು ಎಂದು ದವೆ ಹೇಳಿದರು. ಈ ಅಪರಾಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121ಎ, 124ಎ, 153, 153ಎ ಹಾಗೂ 153ಬಿ ಅಡಿಯಲ್ಲಿ ಬರುತ್ತದೆ.

ಇದರಲ್ಲಿರುವ ಎರಡು ಅಪರಾಧಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ನಮಗೆ ತಿಳಿದಿದೆ ಎಂದು ದವೆ ಹೇಳಿದರು. ತನ್ನ ಕಕ್ಷಿದಾರಳಿಗೆ ಇದುವರೆಗೆ ಎಫ್ಐಆರ್ ಪ್ರತಿ ದೊರಕಿಲ್ಲ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿ ಅವರು ಮಣಿಪುರವನ್ನು ಪ್ರತಿನಿಧಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಅರ್ಜಿಯ ಪ್ರತಿ ನೀಡುವಂತೆ ದವೆ ಅವರಿಗೆ ತಿಳಿಸಿದರು. ‘‘ಅವರು ನಮ್ಮ ಬಾರ್ ಕೌನ್ಸಿಲ್ ನ ಸದಸ್ಯೆ. ಅವರನ್ನು ಬಂಧಿಸುವ ಆತಂಕ ಇದೆ. ಅವರಲ್ಲಿ ಎಫ್ಐಆರ್ ನ ಪ್ರತಿ ಇಲ್ಲ’’ ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ತುಷಾರ್ ಮೆಹ್ತಾ ಅವರಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News