ಪಶ್ಚಿಮ ಬಂಗಾಳ: ಗ್ರಾಮೀಣ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಟಿಎಂಸಿಗೆ ಭರ್ಜರಿ ಜಯ

Update: 2023-07-13 03:27 GMT

Photo: PTI

ಕೊಲ್ಕತ್ತಾ: ವ್ಯಾಪಕ ಹಿಂಸಾಚಾರದಿಂದಾಗಿ ರಾಷ್ಟ್ರದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ ಆಡಳಿತಾರೂಢ ಟಿಎಂಸಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಸಮರಕ್ಕೆ ಸಜ್ಜಾಗಿದೆ. ರಾಜ್ಯದ ಎಲ್ಲ 20 ಜಿಲ್ಲಾಪರಿಷತ್ ಗಳು ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷದ ಪಾಲಾಗಿವೆ. ಉಳಿದಂತೆ 341 ಪಂಚಾಯ್ತಿ ಸಮಿತಿಗಳ ಪೈಕಿ 317, 3317 ಗ್ರಾಮಪಂಚಾಯ್ತಿಗಳ ಪೈಕಿ 2644ನ್ನು ಟಿಎಂಸಿ ತನ್ನದಾಗಿಸಿಕೊಂಡಿದೆ.

ಎರಡನೇ ಸ್ಥಾನದಲ್ಲಿರುವ ಬಿಜೆಪಿ ಆರು ಪಂಚಾಯ್ತಿ ಸಮಿತಿಗಳನ್ನು ಹಾಗೂ 220 ಗ್ರಾಮಪಂಚಾಯ್ತಿಗಳನ್ನು ಗೆದ್ದುಕೊಂಡಿದೆ. ಎಣಿಕೆಯ ಮೊದಲ ದಿನ ಕಂಡುಬಂದ ಪ್ರವೃತ್ತಿಯಂತೆ ಮೂರು ಸ್ತರಗಳ ಪಂಚಾಯ್ತಿ ಚುನಾವಣೆಯಲ್ಲಿ ಟಿಎಂಸಿ ಪ್ರಾಬಲ್ಯ ನಿಚ್ಚಳವಾಗಿದೆ. ಹಿಂದೊಮ್ಮೆ ಎಡಪಕ್ಷಗಳ ಭದ್ರಕೋಟೆ ಎನಿಸಿದ್ದ ರಾಜ್ಯದಲ್ಲಿ ಸಿಪಿಐಎಂ ಕೇವಲ ಎರಡು ಪಂಚಾಯ್ತಿ ಸಮಿತಿಗಳು ಹಾಗೂ 38 ಗ್ರಾಮಪಂಚಾಯ್ತಿಗಳಿಗೆ ತೃಪ್ತಿಪಟ್ಟುಕೊಂಡಿದೆ. ಎರಡನೇ ಸ್ತರದ ಪಂಚಾಯ್ತಿ ಸಮಿತಿಗಳಲ್ಲಿ ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದ್ದರೆ, ಮೂರನೇ ಸ್ತರದಲ್ಲಿ ನಾಲ್ಕು ಪಂಚಾಯ್ತಿಗಳನ್ನು ಗೆದ್ದುಕೊಂಡಿದೆ.

ಬಿಜೆಪಿ ಪ್ರಭಾವ ಕೂಚ್ಬೆಹಾರ್ ಮತ್ತು ಅಲಿಪುರದೂರು, ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂಧು ಅಧಿಕಾರಿಯವರ ಸ್ವಕ್ಷೇತ್ರವಾದ ಪೂರ್ವ ಮಿಡ್ನಾಪುರದ ನಂದಿಗ್ರಾಮಗಳಿಗೆ ಸೀಮಿತವಾಗಿದೆ. ಈ ಪ್ರದೇಶಗಳಲ್ಲಿ ಕೂಡಾ ಕೇಸರಿ ಪಕ್ಷದ ಮತಪಾಲು ಗಣನೀಯವಾಗಿ ಕುಸಿದಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪ್ರಾಬಲ್ಯ ಇರುವ ಕಡೆಗಳಲ್ಲಿ ಕೂಡಾ ಟಿಎಂಸಿ ತನ್ನ ಪ್ರಭಾವ ಬೀರಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗದ 18 ಕ್ಷೇತ್ರಗಳ ಪೈಕಿ ಬಿಜೆಪಿ 8ನ್ನು ಗೆದ್ದುಕೊಂಡಿತ್ತು. 2022ರಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 110 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ವಿರೋಧ ಪಕ್ಷಗಳು 10ಕ್ಕಿಂತ ಕಡಿಮೆ ಕಡೆಗಳಲ್ಲಿ ಗೆಲುವು ಸಾಧಿಸಿದ್ದವು. ರಾಜ್ಯದ ಪ್ರಮುಖ ನಗರಗಳ 10 ಮಹಾನಗರಪಾಲಿಕೆಗಳ ಪೈಕಿ 9 ಟಿಎಂಸಿ ನಿಯಂತ್ರಣದಲ್ಲಿವೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಒಟ್ಟಾಗಿ 1700 ಗ್ರಾಮಪಂಚಾಯ್ತಿ ಸ್ಥಾನಗಳನ್ನು ಗೆದ್ದಿದ್ದು, ಟಿಎಂಸಿ 2800 ಕಡೆಗಳಲ್ಲಿ ಜಯ ಗಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News