ಪಶ್ಚಿಮ ಬಂಗಾಳ: ಪಂಚಾಯತ್ ಚುನಾವಣಾ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತನ ಸಾವು, ಹಲವರಿಗೆ ಗಾಯ

Update: 2023-07-02 16:08 GMT

ಸಾಂದರ್ಭಿಕ ಚಿತ್ರ \ Photo: PTI 

ಕೋಲ್ಕತಾ: ಪಂಚಾಯತ್ ಚುನಾವಣೆಗಳು ಸನ್ನಿಹಿತವಾಗಿರುವ ಪಶ್ಚಿಮ ಬಂಗಾಳದಲ್ಲಿ ಶನಿವಾರ ತಡರಾತ್ರಿ ಘರ್ಷಣೆಗಳು ಭುಗಿಲೆದ್ದಿದ್ದು, ಆಡಳಿತಾರೂಢ ಟಿಎಂಸಿಯ ಓರ್ವ ಕಾರ್ಯಕರ್ತ ಕೊಲ್ಲಲ್ಪಟ್ಟಿದ್ದಾನೆ. ಟಿಎಂಸಿ ಮತ್ತು ಪ್ರತಿಪಕ್ಷ ಸಂಘಟನೆಗಳ ಇತರ ಹಲವಾರು ಸದಸ್ಯರು ಗಾಯಗೊಂಡಿದ್ದಾರೆ.

ದಕ್ಷಿಣ 24 ಪರಗಣಗಳ ಜಿಲ್ಲೆಯ ಬಸಂತಿ ಎಂಬಲ್ಲಿ ಮನೆಗೆ ಮರಳುತ್ತಿದ್ದ ಟಿಎಂಸಿ ಕಾರ್ಯಕರ್ತ ಜಿಯಾರುಲ್ ಮೊಲ್ಲಾ (52)ರನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಟಿಎಂಸಿ ನಾಯಕ ಅಮರುಲ್ ಲಸ್ಕರ್ ಅವರ ನಿಕಟವರ್ತಿಯಾಗಿದ್ದ ಮೊಲ್ಲಾ ಆಡಳಿತ ಪಕ್ಷದ ಆಂತರಿಕ ಕಲಹಕ್ಕೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF)ನ ನಾಯಕರೋರ್ವರು ಹೇಳಿದರು.

ರಾಜಕೀಯವನ್ನು ತೊರೆಯುವಂತೆ ತನಗೆ ಎದುರಾಳಿ ಬಣದಿಂದ ಆಗಾಗ್ಗೆ ಬೆದರಿಕೆಗಳು ಬರುತ್ತಿವೆ ಎಂದು ತನ್ನ ತಂದೆ ಪೊಲೀಸರಿಗೆ ದೂರು ಸಲ್ಲಿಸಿದ್ದರು,ಆದರೆ ಅವರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ ಎಂದು ಮೊಲ್ಲಾ ಅವರ ಪುತ್ರಿ ಹಾಗೂ ಕಥಲ್ಬೇರಿಯಾ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿಯಾಗಿರುವ ಮನ್ವಾರಾ ಆರೋಪಿಸಿದರು.

‘ನಾನು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದೇನೆ ಮತ್ತು ಪಕ್ಷದ ಇನ್ನೊಂದು ಸ್ಥಳೀಯ ಬಣವು ಇದನ್ನು ಸಹಿಸಿಲ್ಲ ’ ಎಂದು ಹೇಳಿದ ಮನ್ವಾರಾ, ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು ಮತ್ತು ಮೊಲ್ಲಾರ ಸಾವಿಗೆ ಕಾರಣರಾದವರ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಸ್ಥಳೀಯ ಟಿಎಂಸಿ ಶಾಸಕ ಶೌಕತ್ ಮೊಲ್ಲಾ ಹೇಳಿದರು.

ಮೊಲ್ಲಾರ ಸಾವಿನೊಂದಿಗೆ ಪ.ಬಂಗಾಳದಲ್ಲಿ ಪಂಚಾಯತ್ ಚುನಾವಣೆಗೆ ಜೂ.9ರಂದು ನಾಮಪತ್ರ ಸಲ್ಲಿಕೆ ಆರಂಭಗೊಂಡಾಗಿನಿಂದ ಕೊಲ್ಲಲ್ಪಟ್ಟವರ ಸಂಖ್ಯೆ 10ಕ್ಕೇರಿದೆ.

ಈ ನಡುವೆ ರವಿವಾರ ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಸಿಪಿಎಂ ಮತ್ತು ಐಎಸ್ಎಫ್ ಬೆಂಬಲಿಗರು ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಘರ್ಷಣೆಗಳಲ್ಲಿ ಎರಡೂ ಕಡೆಗಳ ಕನಿಷ್ಠ 10 ಜನರು ಗಾಯಗೊಂಡಿದ್ದಾರೆ.

ಪ್ರತ್ಯೇಕ ಘಟನೆಯಲ್ಲಿ ಚಲ್ತಾಬೇರಿಯಾ ಗ್ರಾ.ಪಂ. ಚುನಾವಣೆಯಲ್ಲಿ ಟಿಎಂಸಿ ಅಭ್ಯರ್ಥಿ ಇಬ್ರಾಹಿಂ ಮೊಲ್ಲಾ ಅವರು ಶನಿವಾರ ರಾತ್ರಿ ಮನೆಗೆ ಮರಳುತ್ತಿದ್ದಾಗ ಅವರನ್ನು ಥಳಿಸಿದ ಐಎಸ್ಎಫ್ ಕಾರ್ಯಕರ್ತರು ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾರೆ.

ರಾಜ್ಯದಲ್ಲಿಯ ಜಿಲ್ಲಾ ಪರಿಷದ್ ಗಳು,ಪಂಚಾಯತ್ ಸಮಿತಿಗಳು ಮತ್ತು ಗ್ರಾಮ ಪಂಚಾಯತ್ ಗಳಲ್ಲಿಯ ಸುಮಾರು 74,000 ಸ್ಥಾನಗಳಿಗಾಗಿ ಜು.8ರಂದು ಚುನಾವಣೆ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News