ಪಶ್ವಿಮ ಬಂಗಾಳ: ನಿಲ್ಲದ ಹಿಂಸಾಚಾರ, ಇಬ್ಬರು ಮೃತ್ಯು
ಹೊಸದಿಲ್ಲಿ: ಪಶ್ಚಿಮಬಂಗಾಳದ ದಕ್ಷಿಣ24 ಪರಗಣ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣೆಗೆ ಸಂಬಂಧಿಸಿದ ಹಿಂಸಾಚಾರಗಳಲ್ಲಿ ಶನಿವಾರ ಇನ್ನೂ ಇಬ್ಬರು ಸಾವನ್ನಪ್ಪಿದ್ದಾರೆ. ಜುಲೈ 7ರಂದು ಭಾನಗರನಲ್ಲಿ ಸೆಕ್ಯುಲರ್ ಫ್ರಂಟ್ ಬೆಂಬಲಿಗರ ಜೊತೆ ನಡೆದ ಘರ್ಷಣೆಯಲ್ಲಿ ಗಂಭೀರ ಗಾಯಗೊಂಡಿದ್ದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಶೇಕ್ ಮುಸ್ಲಿಂ ಎಂಬಾತ ಶನಿವಾರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಅದೇ ಜಿಲ್ಲೆಯ ಕ್ಯಾನಿಕ್ ಇಟ್ಖೋಲಾ ಗ್ರಾಮಪಂಚಾಯತ್ನಲ್ಲಿ ಟಿಎಂಸಿ ಬೂತ್ ಅಧ್ಯಕ್ಷ ನಾಂತು ಗಾಝಿ ಅವರನ್ನು ಕಡಿದು ಹತ್ಯೆಗೈಯಲಾಗಿದೆ. ಈ ಕೊಲೆಯ ಹಿಂದೆ ಐಎಸ್ಎಫ್ ಕಾರ್ಯಕರ್ತರ ಕೈವಾಡವಿದೆಯೆಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಜುಲೈ 8ರಂದು ಪಂಚಾಯತ್ ಚುನಾವಣೆ ನಡೆದು ಒಂದು ವಾರ ಕಳೆದರೂ ರಾಜಕೀಯ ಪಕ್ಷಗಳ ನಡುವೆ ಘರ್ಷಣೆ, ಹಿಂಸಾಚಾರ ಕೊನೆಗೊಂಡಿಲ್ಲ. ಜೂನ್ 8ರಂದು ಚುನಾವಣಾ ಅಧಿಸೂಚನೆ ಹೊರಡಿಸಿದ ಬಳಿಕ ಹಿಂಸಾಚಾರ ಭುಗಿಲೆದ್ದಿದ್ದು, ಈವರೆಗೆ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದ ಹಲವೆಡೆ ನಾಡಬಾಂಬ್‌ಗಳನ್ನು ವಶಪಡಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಮುರ್ಷಿದಾಬಾದ್ ಜಿಲ್ಲೆಯ ಐದು ಸ್ಥಳಗಳಲ್ಲಿ ಸ್ಫೋಟಕಗಳನ್ನು ಪತ್ತೆಯಾಗಿವೆ. ಭಿರ್ಭೂಮ್ ಜಿಲ್ಲೆಯ ಭಾನಗರ್ ಹಾಗೂ ದುಬ್ರಾಜ್ಪುರ್ನಲ್ಲಿ ಹಲವಾರು ಕಚ್ಚಾಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುರ್ಶಿದಾಬಾದ್ ಸಲಾರ್ನಲ್ಲಿ ಶನಿವಾರ ಬೆಳಗ್ಗೆ ಹೊಲವೊಂದರಲ್ಲಿ ಕಚ್ಚಾ ಬಾಂಬ್ ಸ್ಫೋಟಿಸಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ.