5,200 ಕೋಟಿ ರೂ.ಗೆ ಪ್ರತಿಯಾಗಿ ಬಿಜೆಪಿ ಏನನ್ನು ಮಾರಿದೆ?: ಕಾಂಗ್ರೆಸ್
ಹೊಸದಿಲ್ಲಿ : ಚುನಾವಣಾ ಬಾಂಡ್ ಗಳ ರೂಪದಲ್ಲಿ ಸ್ವೀಕರಿಸಿರುವ 5,200 ಕೋಟಿ ರೂಪಾಯಿಗಳಿಗೆ ಪ್ರತಿಯಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಏನನ್ನು ಮಾರಾಟ ಮಾಡಿದೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಪವನ್ ಖೇರಾ ಗುರುವಾರ ಪ್ರಶ್ನಿಸಿದ್ದಾರೆ.
ಚುನಾವಣಾ ಬಾಂಡ್ ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಬಳಿಕ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
2022ರವರೆಗೆ ಮಾರಾಟಗೊಂಡ ಒಟ್ಟು 9,208 ಕೋಟಿ ರೂಪಾಯಿ ಮೌಲದ್ಯ ಚುನಾವಣಾ ಬಾಂಡ್ ಗಳ ಪೈಕಿ 5,270 ಕೋಟಿ ರೂ. ಮೌಲ್ಯದ ಬಾಂಡ್ ಗಳನ್ನು ಬಿಜೆಪಿಯೊಂದೇ ಪಡೆದಿದೆ ಎಂದು ಚುನಾವಣಾ ಆಯೋಗವು ಪ್ರಕಟಿಸಿದೆ.
‘‘ನೀವು ವಿಮಾನ ನಿಲ್ದಾಣಗಳನ್ನು ಮತ್ತು ಕಲ್ಲಿದ್ದಲು ಗಣಿಗಳನ್ನು ಮಾರಾಟ ಮಾಡಿದಿರಾ ಮತ್ತು ಶಾಸಕರನ್ನು ಖರೀದಿಸಿದಿರಾ? ಇದನ್ನು ತಿಳಿಯುವ ಹಕ್ಕು ನಮಗಿದೆ’’ ಎಂದು ಖೇರಾ ಹೇಳಿದರು.
ಅದೇ ವೇಳೆ, ಸುಪ್ರೀಂ ಕೋರ್ಟ್ ನ ತೀರ್ಪಿನಿಂದ ಪಾರಾಗಲು ಕೇಂದ್ರ ಸರಕಾರವು ಅಧ್ಯಾದೇಶವೊಂದನ್ನೂ ಹೊರಡಿಸಬಹುದು ಎಂಬ ಭೀತಿಯನ್ನು ಕಾಂಗ್ರೆಸ್ ನಾಯಕ ವ್ಯಕ್ತಪಡಿಸಿದರು.
ಚುನಾವಣಾ ಆಯೋಗ, ಹಣಕಾಸು ಸಚಿವಾಲಯ ಮತ್ತು ಕಾನೂನು ಸಚಿವಾಲಯದ ಅಧಿಕಾರಿಗಳ ವಿರೋಧವನ್ನು ಕಡೆಗಣಿಸಿ ಕೇಂದ್ರ ಸರಕಾರವು ಚುನಾವಣಾ ಬಾಂಡ್ ಗಳನ್ನು ದೇಶದ ಮೇಲೆ ಹೇರಿತ್ತು ಎಂದು ಖೇರಾ ಆರೋಪಿಸಿದರು.
‘‘ಚುನಾವಣಾ ಬಾಂಡ್ ಯೋಜನೆಯು ಬೃಹತ್ ಭ್ರಷ್ಟಾಚಾರ ಹಗರಣವಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಶಾಮೀಲಾಗಿದ್ದಾರೆ. ಇಂದು ಪ್ರಧಾನಿಯ ಭ್ರಷ್ಟಾಚಾರ ಬಹಿರಂಗಗೊಂಡಿದೆ” ಎಂದರು.