ಮಣಿಪುರವು ಹೊತ್ತಿ ಉರಿಯಬೇಕು ಎಂದು ಬಿಜೆಪಿ ಉದ್ದೇಶಪೂರ್ವಕವಾಗಿ ಬಯಸಿದೆ : ಖರ್ಗೆ

Update: 2024-11-17 15:34 GMT

ಮಲ್ಲಿಕಾರ್ಜುನ ಖರ್ಗೆ | PC : ANI 

ಹೊಸದಿಲ್ಲಿ : ಮಣಿಪುರದಲ್ಲಿ ಹೊಸದಾಗಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು,ಈ ಗಡಿ ರಾಜ್ಯವು ಹೊತ್ತಿ ಉರಿಯಬೇಕು ಎಂದು ಆಡಳಿತಾರೂಢ ಬಿಜೆಪಿಯು ಉದ್ದೇಶಪೂರ್ವಕವಾಗಿ ಬಯಸಿದೆ ಮತ್ತು ಇದು ಅದರ ದ್ವೇಷಪೂರಿತ ವಿಭಜಕ ರಾಜಕೀಯಕ್ಕೆ ಪೂರಕವಾಗಿದೆ ಎಂದು ರವಿವಾರ ಆರೋಪಿಸಿದ್ದಾರೆ.

ಮಣಿಪುರದ ಜನರು ತಮ್ಮ ರಕ್ಷಣೆಯ ಹೊಣೆಯನ್ನು ತಮಗೇ ಬಿಟ್ಟಿರುವ ಮತ್ತು ತಮ್ಮ ನೋವುಗಳನ್ನು ಶಮನಿಸಲು ರಾಜ್ಯಕ್ಕೆ ಎಂದೂ ಕಾಲಿರಿಸದ ಪ್ರಧಾನಿ ನರೇಂದ್ರ ಮೋದಿಯವರನ್ನು ಎಂದಿಗೂ ಕ್ಷಮಿಸುವುದಿಲ್ಲ, ಎಂದಿಗೂ ಮರೆಯುವುದಿಲ್ಲ ಎಂದು ಖರ್ಗೆ ಹೇಳಿದ್ದಾರೆ.

‘ನರೇಂದ್ರ ಮೋದಿಜಿ, ನಿಮ್ಮ ಡಬಲ್ ಇಂಜಿನ್ ಸರಕಾರಗಳಲ್ಲಿ ಮಣಿಪುರವು ಒಂದಲ್ಲ, ಮಣಿಪುರವು ಸುರಕ್ಷಿತವೂ ಅಲ್ಲ ’ಎಂದು ಎಕ್ಸ್ ಪೋಸ್ಟ್‌ನಲ್ಲಿ ಹೇಳಿರುವ ಖರ್ಗೆ,‘ಮೇ 2023ರಿಂದ ಮಣಿಪುರವು ಊಹಿಸಲಾಗದ ನೋವು,ವಿಭಜನೆ ಮತ್ತು ಹಿಂಸೆಯ ದಾವಾಲನವನ್ನು ಅನುಭವಿಸುತ್ತಿದೆ,ಇದು ಅದರ ಜನತೆಯ ಭವಿಷ್ಯವನ್ನು ನಾಶ ಮಾಡಿದೆ. ಬಿಜೆಪಿಯು ಮಣಿಪುರವು ಹೊತ್ತಿ ಉರಿಯಬೇಕೆಂದು ಉದ್ದೇಶಪೂರ್ವಕವಾಗಿ ಬಯಸಿದಂತಿದೆ. ಏಕೆಂದರೆ ಅದು ಅದರ ದ್ವೇಷಪೂರಿತ ವಿಭಜಕ ರಾಜಕೀಯಕ್ಕೆ ಪೂರಕವಾಗಿದೆ ಎಂದು ನಾವು ಅತ್ಯಂತ ಜವಾಬ್ದಾರಿಯೊಂದಿಗೆ ಹೇಳುತ್ತಿದ್ದೇವೆ’ ಎಂದು ಬರೆದಿದ್ದಾರೆ.

ನ.7ರಿಂದ ರಾಜ್ಯದಲ್ಲಿ ಕನಿಷ್ಠ 17 ಜನರು ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಸಂಘರ್ಷ ಪೀಡಿತ ಪ್ರದೇಶಗಳ ಪಟ್ಟಿಗೆ ಹೊಸ ಜಿಲ್ಲೆಗಳು ಸೇರ್ಪಡೆಯಾಗುತ್ತಲೇ ಇವೆ. ಬೆಂಕಿಯ ಜ್ವಾಲೆ ನೆರೆಯ ಈಶಾನ್ಯ ರಾಜ್ಯಗಳಿಗೂ ಹರಡುತ್ತಿದೆ ಎಂದು ಹೇಳಿರುವ ಖರ್ಗೆ, ಸುಂದರ ಗಡಿ ರಾಜ್ಯ ಮಣಿಪುರವನ್ನು ನೀವು ವಿಫಲಗೊಳಿಸಿದ್ದೀರಿ. ಭವಿಷ್ಯದಲ್ಲಿ ನೀವು ಮಣಿಪುರಕ್ಕೆ ಭೇಟಿ ನೀಡಿದರೂ ರಾಜ್ಯದ ಜನರು ತಮ್ಮ ರಕ್ಷಣೆಯ ಹೊಣೆಯನ್ನು ತಮಗೆ ಬಿಟ್ಟ ಹಾಗೂ ತಮ್ಮ ನೋವನ್ನು ಶಮನಿಸಲು ಮತ್ತು ಪರಿಹಾರವನ್ನು ಕಂಡುಕೊಳ್ಳಲು ರಾಜ್ಯಕ್ಕೆ ಎಂದೂ ಕಾಲಿಡದ ನಿಮ್ಮನ್ನು ಕ್ಷಮಿಸುವುದಿಲ್ಲ. ನೀವು ಮಾಡಿದ್ದನ್ನು ಮರೆಯುವುದೂ ಇಲ್ಲ ಎಂದು ಕಿಡಿಕಾರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News