2002ರ ಗುಜರಾತ್ ಗಲಭೆ: ಮೃತರ ಕುಟುಂಬ ಸದಸ್ಯರಿಗೆ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ವಯೋಮಿತಿ ಸಡಿಲಿಕೆ ಹಿಂದೆಗೆದುಕೊಂಡ ಗೃಹ ಸಚಿವಾಲಯ

Update: 2025-04-13 15:59 IST
2002ರ ಗುಜರಾತ್ ಗಲಭೆ: ಮೃತರ ಕುಟುಂಬ ಸದಸ್ಯರಿಗೆ ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ವಯೋಮಿತಿ ಸಡಿಲಿಕೆ ಹಿಂದೆಗೆದುಕೊಂಡ ಗೃಹ ಸಚಿವಾಲಯ

Photo credit: PTI

  • whatsapp icon

ಹೊಸದಿಲ್ಲಿ: 2002ರ ಗುಜರಾತ್ ಗಲಭೆಗಳಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರಿಗೆ ಕೇಂದ್ರ ಸರಕಾರಿ ಹುದ್ದೆಗಳಿಗೆ ನೇಮಕಾತಿಯಲ್ಲಿ ತನ್ನ ವಯೋಮಿತಿ ಸಡಿಲಿಕೆಯನ್ನು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ)ವು ಹಿಂದೆಗೆದುಕೊಂಡಿದೆ. ಈ ವಯೋಮಿತಿ ಸಡಿಲಿಕೆಯು 2007ರಿಂದಲೂ ಅಸ್ತಿತ್ವದಲ್ಲಿತ್ತು.

ಗೃಹ ಸಚಿವಾಲಯವು ಮಾ.28ರಂದು ಗುಜರಾತ್ ಮುಖ್ಯ ಕಾರ್ಯದರ್ಶಿಗೆ ಹೊರಡಿಸಿರುವ ಆದೇಶದಲ್ಲಿ,2002ರ ಗುಜರಾತ್ ಗಲಭೆಗಳಲ್ಲಿ ಮೃತಪಟ್ಟವರ ಮಕ್ಕಳು/ಕುಟುಂಬ ಸದಸ್ಯರಿಗೆ ಅರೆ-ಮಿಲಿಟರಿ ಪಡೆಗಳು,ಐಆರ್‌ಬಿ ಬಟಾಲಿಯನ್‌ಗಳು,ರಾಜ್ಯ ಪೋಲಿಸ್ ಪಡೆಗಳು,ಸಾರ್ವಜನಿಕ ವಲಯದ ಸಂಸ್ಥೆಗಳು ಹಾಗೂ ಇತರ ರಾಜ್ಯ ಮತ್ತು ಕೇಂದ್ರ ಸರಕಾರಿ ಇಲಾಖೆಗಳಲ್ಲಿ ನೇಮಕಾತಿಗಳಲ್ಲಿ ವಯೋಮಿತಿಯಲ್ಲಿ ಅಗತ್ಯ ಸಡಿಲಿಕೆಯ ಮೂಲಕ ನೀಡಲಾಗಿದ್ದ ಆದ್ಯತೆಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಿಂದೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

2007ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು 2002ರ ಗಲಭೆಗಳಲ್ಲಿ ಮೃತಪಟ್ಟವರ ಮಕ್ಕಳು ಮತ್ತು ಕುಟುಂಬ ಸದಸ್ಯರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ ವಿಶೇಷ ನಿಬಂಧನೆಗಳನ್ನು ಜಾರಿಗೊಳಿಸಿದ 18 ವರ್ಷಗಳ ಬಳಿಕ ಈ ಬೆಳವಣಿಗೆ ನಡೆದಿದೆ. ಮೃತರ ಸಂಬಂಧಿಕರಿಗೆ ಹಣಕಾಸು ಪರಿಹಾರದ ಜೊತೆಗೆ ವಯೋಮಿತಿ ಸಡಿಲಿಕೆಯೊಂದಿಗೆ ನೇಮಕಾತಿಗಳಲ್ಲಿ ಆದ್ಯತೆಯನ್ನು ನೀಡಲಾಗಿತ್ತು.

2014ರಲ್ಲಿ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರವು ಗುಪ್ತಚರ ಸಂಸ್ಥೆ(ಐಬಿ) ಮತ್ತು ಸಿಐಎಸ್‌ಎಫ್‌ನಲ್ಲಿ ನೇಮಕಾತಿಗಳಿಗೂ ಈ ವಯೋಮಿತಿ ಸಡಿಲಿಕೆಯನ್ನು ವಿಸ್ತರಿಸಿತ್ತು. ಗೃಹ ಸಚಿವಾಲಯವು ಪ್ರಕಟಿಸಿದ್ದ ಎರಡು ಪ್ರತ್ಯೇಕ ಜಾಹೀರಾತುಗಳಲ್ಲಿ ಗುಜರಾತ್ ಗಲಭೆಗಳಲ್ಲಿ ಮೃತರ ಮಕ್ಕಳು ಮತ್ತು ಅವಲಂಬಿತ ಕುಟುಂಬ ಸದಸ್ಯರಿಗೆ ಗರಿಷ್ಠ ವಯೋಮಿತಿಯನ್ನು ಐದು ವರ್ಷಗಳವರೆಗೆ ಸಡಿಲಿಸಲಾಗಿತ್ತು.

2002ರ ಗಲಭೆಗಳಲ್ಲಿ ಮೃತರ ಸಂಬಂಧಿಗಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗವನ್ನು ನೀಡುವಂತೆ ಕೇಂದ್ರ ಅಥವಾ ರಾಜ್ಯ ಸರಕಾರಗಳಿಗೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಜುಲೈ 2015ರಲ್ಲಿ ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು ಆದೇಶವನ್ನು ಹೊರಡಿಸಲು ನಿರಾಕರಿಸಿತ್ತು.

ಗಲಭೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಾಗಿರುವುದರಿಂದ ಸರಕಾರಿ ಉದ್ಯೋಗಗಳನ್ನು ಖಚಿತಪಡಿಸಲು ಮುಂದಿನ ಆದೇಶಗಳನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತಿಳಿಸಿತ್ತು. ಈ ವಿಷಯವು ಈಗಲೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಾಕಿಯಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News