ದೇವಾಲಯದ ದ್ವಾರ ತೆರೆಯದ್ದಕ್ಕೆ ದೇವಾಲಯದೊಳಕ್ಕೆ ಬಲವಂತವಾಗಿ ಪ್ರವೇಶಿಸಿ ಅರ್ಚಕನ ಮೇಲೆ ಹಲ್ಲೆ ನಡೆಸಿದ ಗುಂಪು

Update: 2025-04-13 11:54 IST
ದೇವಾಲಯದ ದ್ವಾರ ತೆರೆಯದ್ದಕ್ಕೆ ದೇವಾಲಯದೊಳಕ್ಕೆ ಬಲವಂತವಾಗಿ ಪ್ರವೇಶಿಸಿ ಅರ್ಚಕನ ಮೇಲೆ ಹಲ್ಲೆ ನಡೆಸಿದ ಗುಂಪು

PC : NDTV 

  • whatsapp icon

ಭೋಪಾಲ್: ದೇವಾಲಯದ ದರ್ಶನದ ಅವಧಿ ಮುಗಿದ ನಂತರ, ಭಕ್ತಾದಿಗಳ ಗುಂಪೊಂದಕ್ಕೆ ದೇವಾಲಯದೊಳಗೆ ಪ್ರವೇಶಿಸಲು ಅವಕಾಶ ನೀಡಲು ನಿರಾಕರಿಸಿದ ಅರ್ಚಕರೊಬ್ಬರ ಮೇಲೆ 30 ಮಂದಿಯ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಶನಿವಾರ ಮಧ್ಯಪ್ರದೇಶದ ದೇವಾಸ್‌ನಲ್ಲಿರುವ ಪ್ರಸಿದ್ಧ ದೇವಾಲಯವಾದ ಮಾತಾ ತೇಕ್ರಿ ದೇವಾಲಯದಲ್ಲಿ ನಡೆದಿದೆ.

ಪೊಲೀಸರ ಪ್ರಕಾರ, ಅಪರಾಧ ಹಿನ್ನೆಲೆ ಹೊಂದಿರುವ ಜೀತು ರಘುವಂಶಿ ಎಂಬ ಹೆಸರಿನ ವ್ಯಕ್ತಿಯು ಶುಕ್ರವಾರ ತಡ ರಾತ್ರಿ 10 ಕಾರುಗಳಲ್ಲಿ ತನ್ನ ಸುಮಾರು 30 ಮಂದಿ ಸಹಚರರೊಂದಿಗೆ ದೇವಾಲಯಕ್ಕೆ ಆಗಮಿಸಿದ್ದ ಎಂದು ದೇವಾಲಯದ ಅರ್ಚಕ ಆರೋಪಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊಗಳಲ್ಲಿ ಮೇಲ್ಭಾಗದಲ್ಲಿ ಕೆಂಪು ದೀಪಗಳನ್ನು ಹೊಂದಿರುವ ಒಂದೆರಡು ಕಾರುಗಳು ಬೆಟ್ಟದ ಮೇಲಿರುವ ದೇವಾಲಯದ ಬಳಿಗೆ ಆಗಮಿಸಿವೆ. ನಂತರ, ಅವರು ದೇವಾಲಯದೊಳಗೆ ಪ್ರಾರ್ಥನೆ ಸಲ್ಲಿಸುತ್ತಿರುವುದು ಅವುಗಳಲ್ಲಿ ಸೆರೆಯಾಗಿದೆ.

ಈ ಕುರಿತು NDTV ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ದೇವಾಲಯದ ಅರ್ಚಕ, "ನಾವು ಮಧ್ಯರಾತ್ರಿಯ ವೇಳೆಗೆ ದೇವಾಲಯದ ಬಾಗಿಲನ್ನು ಮುಚ್ಚುತ್ತೇವೆ. ನಾನು ಅದಾಗಲೇ ದೇವಾಲಯದ ದ್ವಾರಗಳನ್ನು ಮುಚ್ಚಿದ್ದಾಗ, ರಾತ್ರಿ ಸುಮಾರು 12.40ರ ವೇಳೆಗೆ ಜಿತು ರಾಘವೇಂದ್ರ ನೇತೃತ್ವದ ಗುಂಪು ದೇವಾಲಯದ ಬಳಿಗೆ ಬಂದಿತು. ಈಗಾಗಲೇ ದೇವಾಲಯದ ಬಾಗಿಲು ಮುಚ್ಚಿದೆ ಎಂದು ನಾನು ಅವರಿಗೆ ತಿಳಿಸಿದಾಗ, ಅವರು ದೇವಾಲಯದ ದ್ವಾರಗಳನ್ನು ತೆರೆಯುವಂತೆ ನನ್ನನ್ನು ಬಲವಂತಪಡಿಸಿದರು ಹಾಗೂ ನನ್ನನ್ನು ಹತ್ಯೆಗೈಯ್ಯುವ ಬೆದರಿಕೆಯನ್ನೂ ಒಡ್ಡಿದರು. ಅವರು ನನ್ನ ಮೇಲೆ ಹಲ್ಲೆಯನ್ನೂ ನಡೆಸಿದರು" ಎಂದು ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ನಗರ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಅಗರ್ವಾಲ್, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ದೇವಾಲಯದ ಆವರಣದಲ್ಲಿರುವ ಸುಮಾರು 50 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಬಿಜೆಪಿ ಶಾಸಕರೊಬ್ಬರ ಪುತ್ರನೇನಾದರೂ ಈ ತಂಡದ ನೇತೃತ್ವ ವಹಿಸಿದ್ದನೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದಷ್ಟೆ ಅವರು ಉತ್ತರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News