ರಾಜ್ಯ ವಿಧಾನಸಭೆಗಳ ಅಂಗೀಕೃತ ಮಸೂದೆಗೆ ರಾಜ್ಯಪಾಲರ ಅಂಕಿತ: ಗಡುವು ವಿಧಿಸಿದ ಸುಪ್ರೀಂಕೋರ್ಟ್

Update: 2025-04-13 08:01 IST
ರಾಜ್ಯ ವಿಧಾನಸಭೆಗಳ ಅಂಗೀಕೃತ ಮಸೂದೆಗೆ ರಾಜ್ಯಪಾಲರ ಅಂಕಿತ: ಗಡುವು ವಿಧಿಸಿದ ಸುಪ್ರೀಂಕೋರ್ಟ್
  • whatsapp icon

ಹೊಸದಿಲ್ಲಿ: ರಾಜ್ಯ ವಿಧಾನಸಭೆಗಳು ಅಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಒಪ್ಪಿಗೆ ನೀಡಲು ಅಥವಾ ಮಸೂದೆಯನ್ನು ವಾಪಾಸು ಕಳುಹಿಸಲು ಇಲ್ಲವೇ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಲು ಸಮಯಮಿತಿ ನಿಗದಿಪಡಿಸುವ ಸಂಬಂಧ ಪಾಕಿಸ್ತಾನ ಮತ್ತು ಅಮೆರಿಕದ ಸಂವಿಧಾನಾತ್ಮಕ ನಿಬಂಧನೆಗಳಿಂದ ಪ್ರೇರಣೆ ಪಡೆದ ಸುಪ್ರೀಂಕೋರ್ಟ್, ಸಮಯಮಿತಿಯ ಉಲ್ಲಂಘನೆಯು ನ್ಯಾಯಾಂಗ ಮೇಲ್ವಿಚಾರಣೆಯ ಉತ್ತರದಾಯಿತ್ವಕ್ಕೆ ಒಳಪಡುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದೀವಾಲಾ ಮತ್ತು ಆರ್.ಮಹದೇವನ್ ಈ ತಿಂಗಳ 8ರಂದು ನೀಡಿದ 415 ಪುಟಗಳ ತೀರ್ಪಿನ ವಿವರಗಳನ್ನು ಸುಪ್ರೀಂಕೋರ್ಟ್ ವೆಬ್ಸೈಟ್ ನಲ್ಲಿ ಶುಕ್ರವಾರ ಅಪ್ ಲೋಡ್ ಮಾಡಲಾಗಿದ್ದು, ರಾಜ್ಯ ವಿಧಾನಸಭೆ ಅಥವಾ ಸಂಸತ್ತು ಆಂಗೀಕರಿಸಿದ ಮಸೂದೆಗಳಿಗೆ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳು ಒಪ್ಪಿಗೆ ನೀಡುವ ಸಂಬಂಧ ಸಂವಿಧಾನದಲ್ಲಿ ಇರುವ "ಸಾಧ್ಯವಾದಷ್ಟು ಬೇಗ" ಎಂಬ ಅಂಶವನ್ನು ಅರ್ಥಪೂರ್ಣವಾಗಿಸುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದೆ.

ಸುಪ್ರೀಂಕೋರ್ಟ್ ನ ಮೇಲ್ವಿಚಾರಣೆ ಅಧಿಕಾರದ ಬಗ್ಗೆ ತೀರ್ಪಿನಲ್ಲಿ ಉಲ್ಲೇಖಿಸಿರುವ ನ್ಯಾಯಮೂರ್ತಿ ಪರ್ದೀವಾಲಾ, "ಸಂವಿಧಾನದಲ್ಲಿ ಅಡಕವಾದ ಯಾವುದೇ ಅಧಿಕಾರ ಚಲಾವಣೆಯು ನ್ಯಾಯಾಂಗದ ಪರಾಮರ್ಶೆಯ ಆಚೆಗೆ ಇರುವುದಿಲ್ಲ. ಆದ್ದರಿಂದ ಸಂವಿಧಾನದ 200 ಮತ್ತು 201ನೇ ವಿಧಿಗಳ ಅನ್ವಯ ರಾಜ್ಯಪಾಲರು ಅಥವಾ ರಾಷ್ಟ್ರಪತಿಗಳ ಕಾರ್ಯಗಳನ್ನು ಇದರಿಂದ ಹೊರತುಪಡಿಸಲು ಸಕಾರಣಗಳಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಪಾಲರಿಗೆ ಸಮಯಮಿತಿ ನಿಗದಿಪಡಿಸುವ ಸಂಬಂಧ ಸಂವಿಧಾನದಲ್ಲಿ ಲಿಖಿತವಾದ ಶಬ್ದಗಳ ಆಚೆಗೆ ನ್ಯಾಯಾಲಯದ ವ್ಯಾಪ್ತಿ ಇದೆಯೇ ಎನ್ನುವುದು ಸುಪ್ರೀಂಕೋರ್ಟ್ ಗೆ ಎದುರಾದ ಮೊದಲ ಪ್ರಶ್ನೆಯಾಗಿತ್ತು. ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿ ಶಾಸಕರ ಅನರ್ಹತೆ ಕೋರಿದ ಮನವಿಗಳನ್ನು ಇತ್ಯರ್ಥಪಡಿಸಲು ಸ್ಪೀಕರ್ ಗಳಿಗೆ ಸಮಯಮಿತಿ ನಿಗದಿಪಡಿಸುವ ಸಂಬಂಧ 2021ರಲ್ಲಿ ನೀಡಿದ ತೀರ್ಪಿನ ಆಧಾರದಲ್ಲೇ ಈ ವಿಚಾರದಲ್ಲೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಪಾಕಿಸ್ತಾನ ಸಂವಿಧಾನದ 75ನೇ ವಿಧಿಯಲ್ಲಿ ಮತ್ತು ಅಮೆರಿಕ ಸಂವಿಧಾನದ ಸೆಕ್ಷನ್ 7ರ 1ನೇ ವಿಧಿಯಲ್ಲಿ ಇರುವ ಉಲ್ಲೇಖವನ್ನು ನ್ಯಾಯಮೂರ್ತಿಗಳು ಉದಾಹರಿಸಿದ್ದಾರೆ. ನಿಗದಿತ ಸಮಯದೊಳಗೆ ಅಧ್ಯಕ್ಷರು ಮಸೂದೆಗೆ ಒಪ್ಪಿಗೆ ನೀಡದಿದ್ದರೆ ಆ ಮಸೂದೆ ಅನುಮೋದನೆಗೊಂಡಿದೆ ಎಂದು ಭಾವಿಸಬೇಕಾಗುತ್ತದೆ ಎಂಬ ಉಲ್ಲೇಖ ಈ ಎರಡು ಸಂವಿಧಾನಗಳಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News