ಕೇಂದ್ರದ ನೀತಿಗಳಿಂದ ಖಾಸಗಿ ಸಂಸ್ಥೆಗಳಿಗೆ ಆಗಿರುವ ಲಾಭದ ಕುರಿತು ಸಿಎಜಿ ಲೆಕ್ಕ ಪರಿಶೋಧನೆ ನಡೆಸಬೇಕು : ಕಾಂಗ್ರೆಸ್ ಆಗ್ರಹ

ಜೈರಾಮ್ ರಮೇಶ್ | PTI
ಹೊಸ ದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ಜನಸಾಮಾನ್ಯರನ್ನು ಲೂಟಿಗೈಯ್ಯುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಈ ಕುರಿತು ಉತ್ತರದಾಯಿತ್ವ ನಿಗದಿಯಾಗಬೇಕು ಹಾಗೂ ಕೇಂದ್ರ ಸರಕಾರದ ನೀತಿಗಳಿಂದ ಖಾಸಗಿ ಸಂಸ್ಥೆಗಳಿಗೆ ಆಗಿರುವ ಲಾಭದ ಕುರಿತು ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಮುಖ್ಯ ಮಹಾಲೇಖಪಾಲರನ್ನು (CAG) ಆಗ್ರಹಿಸಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ(ಸಂವಹನ) ಜೈರಾಮ್ ರಮೇಶ್, ಈ ವಿಚಾರದಲ್ಲಿ ಉದ್ದೇಶಪೂರ್ವಕ ನಿರ್ಲಕ್ಷ್ಯವಾಗಿದೆಯೆ ಅಥವಾ ಹಿತಾಸಕ್ತಿ ಸಂಘರ್ಷ ಅಡಗಿದೆಯೆ ಎಂಬುದರ ಕುರಿತು ಕೇಂದ್ರ ಜಾಗೃತ ಆಯೋಗ ಹಾಗೂ ಕೇಂದ್ರೀಯ ತನಿಖಾ ದಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ʼಭಾರತದ ಜನತೆಯನ್ನು ಲೂಟಿಗೈಯ್ಯಲಾಗುತ್ತಿದೆ. ಒಂದು ಕಡೆ ಮೋದಿ ಸರಕಾರ ತೆರಿಗೆ ಹೊರೆಯನ್ನು ಹೆಚ್ಚಳ ಮಾಡುವ ಮೂಲಕ, ಜನರ ಜೇಬುಗಳ್ಳತನ ನಡೆಸುತ್ತಿದ್ದರೆ, ಮತ್ತೊಂದೆಡೆ, ಖಾಸಗಿ ಹಾಗೂ ಸರಕಾರಿ ತೈಲ ಕಂಪನಿಗಳು ಲಾಭ ಮಾಡಿಕೊಳ್ಳುತ್ತಿವೆ. ಇದು ಬಹಿರಂಗ ಆರ್ಥಿಕ ಶೋಷಣೆಯಾಗಿದೆ!ʼ ಎಂದು ಅವರು ಆರೋಪಿಸಿದ್ದಾರೆ.
"ಸತ್ಯವೇನೆಂದರೆ, ಮೇ 2014ರಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕ 9.20 ರೂ. ಆಗಿದ್ದರೆ, ಡೀಸೆಲ್ ಮೇಲಿನ ಅಬಕಾರಿ ಸುಂಕ 3.46 ರೂ.ನಷ್ಟಿತ್ತು. ಅದೀಗ ಮೋದಿ ಸರಕಾರದ ಅವಧಿಯಲ್ಲಿ ಕ್ರಮವಾಗಿ ಪೆಟ್ರೋಲ್ ಮೇಲೆ 19.90 ರೂ.ಗೆ ಹಾಗೂ ಡೀಸೆಲ್ ಮೇಲೆ 15.80 ರೂ.ಗೆ ಏರಿಕೆಯಾಗಿದೆ. ಅರ್ಥಾತ್, ಕ್ರಮವಾಗಿ ಶೇ. 54 ಹಾಗೂ ಶೇ. 357ರಷ್ಟು ಏರಿಕೆಯಾಗಿದೆ. ಕೇಂದ್ರ ಸರಕಾರ ಕಳೆದ 11 ವರ್ಷಗಳಲ್ಲಿ ಪೆಟ್ರೋಲಿಯಂ ವಲಯದಿಂದ 39.54 ಲಕ್ಷ ಕೋಟಿ ರೂ. ಲಾಭ ಗಳಿಸಿದ್ದರೂ, ಜನರಿಗೆ ಯಾವುದೇ ವಿನಾಯಿತಿ ನೀಡಿಲ್ಲ ಎಂದು ಅವರು ಟೀಕಿಸಿದ್ದಾರೆ.