ದಿಲ್ಲಿ ಸರಕಾರವನ್ನು ರೇಖಾ ಗುಪ್ತಾ ಬದಲಿಗೆ ಅವರ ಪತಿ ಮುನ್ನಡೆಸುತ್ತಿದ್ದಾರೆ : ಅತಿಶಿ ಆರೋಪ

Update: 2025-04-13 15:23 IST
ದಿಲ್ಲಿ ಸರಕಾರವನ್ನು ರೇಖಾ ಗುಪ್ತಾ ಬದಲಿಗೆ ಅವರ ಪತಿ ಮುನ್ನಡೆಸುತ್ತಿದ್ದಾರೆ : ಅತಿಶಿ ಆರೋಪ

ವಿಪಕ್ಷ ನಾಯಕಿ ಅತಿಶಿ | ANI  

  • whatsapp icon

ಹೊಸ ದಿಲ್ಲಿ: ಮುಖ್ಯಮಂತ್ರಿ ರೇಖಾ ಗುಪ್ತ ಅವರ ಪತಿ ಮನೀಶ್ ಗುಪ್ತ ಅನಧಿಕೃತವಾಗಿ ದಿಲ್ಲಿ ಸರಕಾರವನ್ನು ನಡೆಸುತ್ತಿದ್ದಾರೆ ಎಂದು ಆಪ್ ನಾಯಕಿ ಹಾಗೂ ದಿಲ್ಲಿ ವಿಧಾನಸಭೆಯ ವಿಪಕ್ಷ ನಾಯಕಿ ಅತಿಶಿ ಆರೋಪಿಸಿದ್ದು, ದಿಲ್ಲಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಯಾಗಿದೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅತಿಶಿ, ಎಂಸಿಡಿ, ಡಿಜೆಬಿ, ಪಿಡಬ್ಲ್ಯೂಡಿ ಹಾಗೂ ಡಿಯುಎಸ್ಐಬಿ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆಯನ್ನು ಮುಖ್ಯಮಂತ್ರಿ ರೇಖಾ ಗುಪ್ತ ಅವರ ಪತಿ ಮನೀಶ್ ಗುಪ್ತ ವಹಿಸಿರುವ ಪೋಟೋವನ್ನು ಹಂಚಿಕೊಂಡಿದ್ದಾರೆ.

"ಈ ಭಾವಚಿತ್ರವನ್ನು ಎಚ್ಚರಿಕೆಯಿಂದ ಗಮನಿಸಿ. ಎಂಸಿಡಿ, ಡಿಜೆಬಿ, ಪಿಡಬ್ಲ್ಯೂಡಿ, ಹಾಗೂ ಡಿಯುಎಸ್ಐಬಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿರುವ ಈ ವ್ಯಕ್ತಿ ಮುಖ್ಯಮಂತ್ರಿ ರೇಖಾ ಗುಪ್ತರ ಪತಿ ಮನೀಶ್ ಗುಪ್ತ ಆಗಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ. ಈ ಸಭೆಯನ್ನು ಅವರು ಗ್ರಾಮೀಣ ಭಾಗಗಳ ಸ್ಥಳೀಯ ಆಡಳಿತದಲ್ಲಿ ಸರಪಂಚ್ ಆಗಿ ಆಯ್ಕೆಯಾಗುವ ಮಹಿಳಾ ಪ್ರತಿನಿಧಿಗಳ ಆಡಳಿತಾತ್ಮಕ ಕರ್ತವ್ಯಗಳನ್ನು ಅನಧಿಕೃತವಾಗಿ ನಿಭಾಯಿಸುವ ಅವರ ಪತಿಯರ ನಡವಳಿಕೆಗಳಿಗೆ ಹೋಲಿಸಿದ್ದಾರೆ.

"ಇದಕ್ಕೂ ಮುನ್ನ, ಹಳ್ಳಿಗಳಲ್ಲಿ ಯಾರಾದರೂ ಮಹಿಳೆ ಸರಪಂಚಳಾಗಿ ಚುನಾಯಿತಳಾದರೆ, ಎಲ್ಲ ಸರಕಾರಿ ಕೆಲಸಗಳನ್ನು ಆಕೆಯ ಪತಿ ನಿಭಾಯಿಸುತ್ತಾರೆ ಎಂಬ ಸಂಗತಿಯನ್ನು ನಾವು ಕೇಳಿದ್ದೆವು. ಆದರೆ, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯಮಂತ್ರಿಯಾಗಿದ್ದರೂ, ಎಲ್ಲ ಸರಕಾರಿ ಕೆಲಸಗಳನ್ನು ಅವರ ಪತಿ ನಿಭಾಯಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.

ಅತಿಶಿಯ ಆರೋಪಗಳಿಗೆ ತಕ್ಷಣವೇ ತಿರುಗೇಟು ನೀಡಿರುವ ದಿಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ವಿರೇಂದ್ರ ಸಚ್ದೇವ್, ಅತಿಶಿ ಹೇಳಿಕೆಗಳು ಅವಹೇಳನಕಾರಿಯಾಗಿವೆ ಎಂದು ಪ್ರತ್ಯಾರೋಪ ಮಾಡಿದ್ದಾರೆ. ರೇಖಾ ಗುಪ್ತ ಅವರ ರಾಜಕೀಯ ಪಯಣವನ್ನು ಸಮರ್ಥಿಸಿಕೊಂಡಿರುವ ಅವರು, "ಅತಿಶಿಯವರೆ, ನೀವೇ ಓರ್ವ ಮಹಿಳೆಯಾಗಿ ಮತ್ತೊಬ್ಬ ಮಹಿಳಾ ನಾಯಕಿಯನ್ನು ಅವಮಾನಿಸುತ್ತಿರುವುದು ಆಶ್ಚರ್ಯಕರವಾಗಿದೆ. ರೇಖಾ ಗುಪ್ತ ದಿಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಹುದ್ದೆಯಿಂದ, ದಿಲ್ಲಿ ಮುಖ್ಯಮಂತ್ರಿ ಹುದ್ದೆವರೆಗೆ ಏರಿದ್ದಾರೆ. ಅವರಿಗೆ ಅವರ ಪತಿ ನೆರವು ನೀಡುತ್ತಿರುವುದು ಕಾನೂನುಬಾಹಿರವೂ ಅಲ್ಲ, ಅನೈತಿಕವೂ ಅಲ್ಲ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News