ವೈದ್ಯಕೀಯ ಸೇವಾ ಕೇಡರ್ ರೂಪಿಸುವ ಕುರಿತು ಸಮಿತಿಯು 2019ರಿಂದ ಸಭೆ ಸೇರಿಲ್ಲ: ಆರ್‌ಟಿಐ ಉತ್ತರದಿಂದ ಬಹಿರಂಗ

Update: 2025-04-13 16:40 IST
ವೈದ್ಯಕೀಯ ಸೇವಾ ಕೇಡರ್ ರೂಪಿಸುವ ಕುರಿತು ಸಮಿತಿಯು 2019ರಿಂದ ಸಭೆ ಸೇರಿಲ್ಲ: ಆರ್‌ಟಿಐ ಉತ್ತರದಿಂದ ಬಹಿರಂಗ

ಸಾಂದರ್ಭಿಕ ಚಿತ್ರ | PC : freepik.com

  • whatsapp icon

ಹೊಸದಿಲ್ಲಿ: ಹತ್ತು ವರ್ಷಗಳ ಹಿಂದೆ ಆರಂಭಿಕ ಉತ್ಸಾಹದ ಹೊರತಾಗಿಯೂ ಭಾರತೀಯ ಆಡಳಿತ ಸೇವೆ (ಐಎಎಸ್) ಮತ್ತು ಭಾರತೀಯ ಪೋಲಿಸ್ ಸೇವೆ(ಐಪಿಎಸ್) ಮಾದರಿಯಲ್ಲಿ ಭಾರತೀಯ ವೈದ್ಯಕೀಯ ಸೇವೆ ಕೇಡರ್‌ನ್ನು ಪ್ರಾರಂಭಿಸುವ ಕೇಂದ್ರದ ಪ್ರಸ್ತಾವದಲ್ಲಿ ಚೂರೂ ಪ್ರಗತಿಯಾಗಿಲ್ಲ.

ಭಾರತೀಯ ವೈದ್ಯಕೀಯ ಸೇವೆ ಕೇಡರ್‌ನ್ನು ಆರಂಭಿಸುವ ಸರಕಾರದ ಐದೂವರೆ ದಶಕಗಳ ಹಿಂದಿನ ಪ್ರಸ್ತಾವವನ್ನು ಪರಿಶೀಲಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಪುನರ್‌ಪರಿಶೀಲನಾ ಸಮಿತಿಯನ್ನು ರಚಿಸಿತ್ತು. 2015ರಲ್ಲಿ ರಚನೆಗೊಂಡಿದ್ದ ಸಮಿತಿಯು 2019ರ ನಂತರ ಸಭೆಯನ್ನೇ ಸೇರಿಲ್ಲ ಎನ್ನುವುದನ್ನು ಆರ್‌ಟಿಐ ಉತ್ತರವು ಬಹಿರಂಗಗೊಳಿಸಿದೆ. ಪ್ರಸ್ತಾವದ ಕುರಿತು ಚರ್ಚಿಸಲು ಸಮಿತಿಯು ಸಭೆ ಸೇರದಿರುವ ವಿಷಯವನ್ನು ಭಾರತೀಯ ವೈದ್ಯಕೀಯ ಸಂಘ(ಐಎಂಎ)ವು ಹಲವಾರು ಎತ್ತಿದ್ದರೂ,‘ತಾನು ಇನ್ನೂ ಆ ವಿಷಯವನ್ನು ಪರಿಗಣಿಸುತ್ತಿದ್ದೇನೆ’ ಎಂದೇ ಸರಕಾರವು ಹೇಳಿಕೊಂಡು ಬಂದಿದೆ.

ಎಂಬಿಬಿಎಸ್ ಶಿಕ್ಷಣವನ್ನು ಪೂರ್ಣಗೊಳಿಸಿ ನೀಟ್-ಪಿಜಿಗಾಗಿ ಸಿದ್ಧತೆ ನಡೆಸುತ್ತಿರುವ ಆರ್‌ಟಿಐ ಕಾರ್ಯಕರ್ತ ಡಾ.ಅಮನ್ ಕೌಶಿಕ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ಆರೋಗ್ಯ ಸಚಿವಾಲಯವು,ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಅವುಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು,ವಿಷಯವು ಪರಿಗಣನೆಯಲ್ಲಿದೆ ಎಂದು ತಿಳಿಸಿದೆ.

ಈಗಲೂ ಸಚಿವಾಲಯವು ಕೇಡರ್‌ನ್ನು ರಚಿಸುವ ಬಗ್ಗೆ ಪರಿಶೀಲಿಸುತ್ತಿದೆಯೇ ಮತ್ತು ಜುಲೈ 2019ರ ನಂತರ ಎಷ್ಟು ರಾಜ್ಯಗಳು ತಮ್ಮ ಅಭಿಪ್ರಾಯಗಳನ್ನು ನೀಡಿವೆ ಎಂಬ ಪ್ರಶ್ನೆಗೆ ಸಚಿವಾಲಯವು,ಈವರೆಗೆ 12 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಉತ್ತರಿಸಿವೆ. ಪ್ರಸ್ತಾವವನ್ನು ಬೆಂಬಲಿಸುವ/ಬೆಂಬಲಿಸದಿರುವ ವಿಷಯಕ್ಕೆ ಸಂಬಂಧಿಸಿದಂತೆ,ಅದು ಪರಿಗಣನೆಯಲ್ಲಿದೆ ಎಂದು ತಿಳಿಸಿದೆ.

ಸಮಿತಿಯ ಕೊನೆಯ ಸಭೆಯು ಯಾವಾಗ ನಡೆದಿತ್ತು ಎಂದು ಕೌಶಿಕ್ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ಉತ್ತರವು ಅತ್ಯಂತ ಆಘಾತಕಾರಿಯಾಗಿದೆ ಎಂದು ಅವರು ಹೇಳಿದರು.

ಈ ವಿಷಯದ ಬಗ್ಗೆ ಸಮಿತಿಯೊಂದನ್ನು 2015ರಲ್ಲಿ ರಚಿಸಲಾಗಿತ್ತು ಮತ್ತು 2019ರ ನಂತರ ಸಮಿತಿಯು ಸಭೆಯನ್ನು ನಡೆಸಿಲ್ಲ ಎಂದು ಮಾರ್ಚ್ 28ರಂದು ನೀಡಿರುವ ಆರ್‌ಟಿಐ ಉತ್ತರದಲ್ಲಿ ಆರೋಗ್ಯ ಸಚಿವಾಲಯವು ತಿಳಿಸಿದೆ.

1960ರಿಂದ ಅನೇಕ ಸಮಿತಿಗಳು ಈ ಕೇಡರ್ ರಚನೆಗೆ ಶಿಫಾರಸು ಮಾಡಿವೆ. ಆದರೆ ಈವರೆಗೆ ಏನನ್ನೂ ಮಾಡಲಾಗಿಲ್ಲ. ಪ್ರಾಥಮಿಕ,ಮಾಧ್ಯಮಿಕ ಮತ್ತು ತೃತೀಯ ಹಂತಗಳಲ್ಲಿ ದೇಶದ ಆರೋಗ್ಯ ಮೂಲಸೌಕರ್ಯಗಳಲ್ಲಿ ಕೊರತೆಯಿದೆ ಎಂದು ಕೌಶಿಕ್ ಹೇಳಿದರು.

ಸ್ವಾತಂತ್ರ್ಯಪೂರ್ವದಲ್ಲಿ ಇಂತಹ ಕೇಂದ್ರೀಯ ಕೇಡರ್ ಅಸ್ತಿತ್ವದಲ್ಲಿತ್ತು. ಆಗಸ್ಟ್ 1947ರಲ್ಲಿ ಅದನ್ನು ರದ್ದುಪಡಿಸಲಾಗಿತ್ತು.

‘ಸ್ವಾತಂತ್ರ್ಯಾನಂತರ ಐಎಎಸ್‌ಗಳು ಆರೋಗ್ಯ ವಿಷಯಗಳ ಮೇಲೆ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿದ್ದಾರೆ. ಅವರು ಯುಪಿಎಸ್‌ಸಿ ಪರೀಕ್ಷಯನ್ನು ಪಾಸಾಗಿರಬಹುದು,ಆದರೆ ನಮಗೆ ಸಾರ್ವಜನಿಕ ಆರೋಗ್ಯ ರಕ್ಷಣೆಯಲ್ಲಿ ತರಬೇತಾದವರ ಅಗತ್ಯವಿದೆ. ವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಲು ಬಯಸುವುದಿಲ್ಲ ಎನ್ನುವುದು ಪ್ರಶ್ನೆಯಾಗಿದೆ,ಸೌಲಭ್ಯಗಳ ಕೊರತೆ ಮತ್ತು ಕಡಿಮೆ ಸಂಬಳ ಇದಕ್ಕೆ ಕಾರಣವಾಗಿವೆ. ಭಾರತೀಯ ವೈದ್ಯಕೀಯ ಕೇಡರ್‌ನ್ನು ಆರಂಭಿಸಿ ಐಎಎಸ್ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಿದರೆ ಅನೇಕ ವೈದ್ಯರು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗುತ್ತಾರೆ. ತನ್ಮೂಲಕ ಗ್ರಾಮೀಣ ಆರೋಗ್ಯ ಸೇವೆಗಳಲ್ಲಿ ಸುಧಾರಣೆಗಳನ್ನು ತರಬಹುದು’ ಎಂದು ಕೌಶಿಕ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News