ಉತ್ತರಾಖಂಡದಲ್ಲಿ ವ್ಯಾಪಕ ಮಳೆ; 100 ರಸ್ತೆಗಳು ಬಂದ್
ಡೆಹ್ರಾಡೂನ್: ಉತ್ತರಾಖಂಡದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಶನಿವಾರ ಕನಿಷ್ಠ 100 ರಸ್ತೆ, ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಭೂಕುಸಿತದಿಂದಾಗಿ ಮುಚ್ಚಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ರಸ್ತೆಗಳು ಜಲಾವೃತವಾಗಿ ಸಂಚಾರ ದಟ್ಟಣೆ, ಬೆಟ್ಟ ಪ್ರದೇಶಗಳಲ್ಲಿ ಸಂಚಾರಕ್ಕೆ ತಡೆ ಉಂಟಾಗಿರುವ ಘಟನೆಗಳೂ ವರದಿಯಾಗಿವೆ. ಹಲವು ಕಡೆಗಳಲ್ಲಿ ರಸ್ತೆ ಪ್ರವಾಹ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಮಾಹಿತಿಯ ಪ್ರಕಾರ, ಶನಿವಾರ ಸಂತೆ ಚಂಪಾವತ್ ಜಿಲ್ಲೆಯ 19, ನೈನಿತಾಲ್ ನ 15, ಚಮೋಲಿಯ 11, ಪಿತ್ತೋರ್ಗಢದ 10, ಅಲ್ಮೋರಾದ ಏಳು, ಪೌರಿಯ ಆರು, ಡೆಹ್ರಾಡೂನ್ ನ 5, ತೆಹ್ರಿ ಹಾಗೂ ರುದ್ರಪ್ರಯಾಗ್ ಜಿಲ್ಲೆಯ ತಲಾ ನಾಲ್ಕು ಹಾಗೂ ಬಗೇಶ್ವರ ಜಿಲ್ಲೆಯ ಎರಡು ರಸ್ತೆಗಳು ಮುಚ್ಚಿವೆ.
ರಾಜ್ಯದಲ್ಲಿ ಕಳೆದ ಐದು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದ್ದು, ಜುಲೈ 13ರ ವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಜುಲೈ 11 ಮತ್ತು 12ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಭೂಕುಸಿತದ ಅಪಾಯ ಹಿನ್ನೆಲೆಯಲ್ಲಿ ಬೆಟ್ಟ ಪ್ರದೇಶಗಳಿಗೆ ಪ್ರಯಾಣ ಕೈಗೊಳ್ಳದಂತೆ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಬಿಕ್ರಮ್ ಸಿಂಗ್ ಸಲಹೆ ಮಾಡಿದ್ದಾರೆ.
ಚಾರ್ ಧಾಮ ಯಾತ್ರಿಕರು ಹಾಗೂ ಕನ್ವರ್ ಯಾತ್ರೆ ಯಾತ್ರಿಕರಿಗೆ ಭಾರಿ ಮಳೆಯಿಂದಾಗಿ ತೀವ್ರ ತೊಂದರೆ ಉಂಟಾಗಿದೆ. ಬದರೀನಾಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಝ್ಪುರ ಛಾಡಾ ಬಳಿ ಭೂಕುಸಿತದಿಂದಾಗಿ ಕೊತಿಯಾಲ್ಸಂದ್ ಮಾರ್ಗವಾಗಿ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಗಂಗೋತ್ರಿ ಹೆದ್ದಾರಿಯಲ್ಲಿ ಭೂಕುಸಿತದಿಂದಾಗಿ ಬಂದರ್ಕೋಟ್ ಪ್ರದೇಶಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿದೆ. ಈ ದೇಗುಲ ಪಟ್ಟಣಕ್ಕೆ ಇದು ಏಕೈಕ ಮಾರ್ಗವಾಗಿರುವುದರಿಂದ, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದು ಕಂಡುಬಂತು. ಕೇದಾರನಾಥ ಮತ್ತು ಯಮುನೋತ್ರಿ ಮಾರ್ಗದಲ್ಲಿ ಸದ್ಯಕ್ಕೆ ಯಾವುದೇ ಅಡ್ಡಿ ಉಂಟಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಭಾರಿ ಮಳೆಯಿಂದಾಗಿ ಅದಕ್ಕೂ ತೊಂದರೆಯಾಗುವ ಸಾಧ್ಯತೆ ಇದೆ.