ಹಿಜಾಬ್ ಗೆ ನಿಷೇಧ ಹೇರಿದಂತೆ ಬಿಂದಿ ಅಥವಾ ತಿಲಕವನ್ನೂ ನಿಷೇಧಿಸುತ್ತೀರಾ? : ಸುಪ್ರೀಂ ಕೋರ್ಟ್ ಪ್ರಶ್ನೆ
ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಹೆಸರಲ್ಲಿ ವಿದ್ಯಾರ್ಥಿನಿಯರ ಶಿರವಸ್ತ್ರವನ್ನು ನಿಷೇಧಿಸಲು ಹೊರಟವರಿಗೆ ಮುಖಭಂಗವಾಗಿದೆ. ಹಿಜಾಬ್ ಹೆಸರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪರೋಕ್ಷ ನಿರ್ಬಂಧ ಹೇರುವ ಕ್ರಮಕ್ಕೂ ಕಡಿವಾಣ ಬಿದ್ದಿದೆ.
ಹಿಜಾಬ್ ಹೆಸರಲ್ಲಿ ಕೋಮು ರಾಜಕೀಯ ಮಾಡುವ ಬಿಜೆಪಿ ಅಥವಾ ಬಿಜೆಪಿ ಮೈತ್ರಿ ಸರಕಾರಗಳ ಆಟಕ್ಕೂ ದೇಶದ ಪರಮೋಚ್ಚ ನ್ಯಾಯಾಲಯದಿಂದಲೇ ಬ್ರೇಕ್ ಬಿದ್ದಿದೆ. ಶಾಲೆಗಳಲ್ಲಿ ಕಾಲೇಜುಗಳಲ್ಲಿ ಹಿಜಾಬಿಗೆ ನಿಷೇಧಕ್ಕೆ ದೇಶದ ಸುಪ್ರೀಂ ಕೋರ್ಟ್ ಖಡಕ್ಕಾಗಿ ಪ್ರತಿಕ್ರಿಯಿಸಿದೆ. ಹಿಜಾಬ್ ಗೆ ನಿಷೇಧ ಹೇರಿದಂತೆ ಬಿಂದಿ ಅಥವಾ ತಿಲಕವನ್ನೂ ನಿಷೇಧಿಸುತ್ತೀರಾ? ಎಂದು ಸುಪ್ರೀಂ ಕೋರ್ಟ್ ಕೇಳಿದೆ.
ಮುಂಬೈನ ಕಾಲೇಜೊಂದು ಹಿಜಾಬ್ ನಿಷೇಧಿಸಿ ಹೊರಡಿಸಿದ ಆದೇಶದ ಜಾರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾಗಶಃ ತಡೆಯಾಜ್ಞೆ ವಿಧಿಸಿದೆ. “ನೀವು ಬಿಂದಿ ಅಥವಾ ತಿಲಕ ಧರಿಸುವ ಹುಡುಗಿಯರನ್ನು ನಿಷೇಧಿಸುತ್ತೀರಾ,” ಎಂದು ಕಾಲೇಜು ತನ್ನ ಕ್ಯಾಂಪಸ್‌ನಲ್ಲಿ ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್ ಧರಿಸುವುದಕ್ಕೆ ಹೇರಿರುವ ನಿಷೇಧ ಕುರಿತು ಸುಪ್ರೀಂ ಕೋರ್ಟ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
“ಹಿಜಾಬ್, ಕ್ಯಾಪ್ ಅಥವಾ ಬ್ಯಾಡ್ಜ್ ಧರಿಸಬಾರದೆಂಬ ನಿರ್ದೇಶನಕ್ಕೆ ಸಂಬಂಧಿಸಿದಂತೆ ಕಾಲೇಜಿನ ಸುತ್ತೋಲೆಗೆ ತಡೆಯಾಜ್ಞೆ ವಿಧಿಸಲಾಗಿದೆ,” ಎಂದು ನ್ಯಾಯಾಲಯ ಹೇಳಿದೆ. ವಿದ್ಯಾರ್ಥಿಗಳ ಧರ್ಮ ಯಾವುದು ಎಂಬುದು ಬಹಿರಂಗವಾಗಬಾರದು ಎಂಬ ಕಾರಣಕ್ಕೆ ನಾವು ಈ ನಿಯಮವನ್ನು ವಿಧಿಸಿದ್ದೇವೆ ಎಂಬ ಕಾಲೇಜಿನ ತರ್ಕವನ್ನು ನ್ಯಾಯಮೂರ್ತಿ ಸಂಜೀವ್ ಖನ್ನಾ ತಳ್ಳಿ ಹಾಕಿದರು.
"ಇದೇನು? ಇಂತಹ ನಿಯಮ ಹೇರಬೇಡಿ..ಇದೇನು? ಧರ್ಮವನ್ನು ಬಹಿರಂಗಪಡಿಸಬೇಡವೇ? ಎಂದು ನ್ಯಾಯಮೂರ್ತಿ ಖನ್ನ ಕೇಳಿದರು. ಅವರ ಹೆಸರುಗಳು ಧರ್ಮವನ್ನು ಬಹಿರಂಗಪಡಿಸುವುದಿಲ್ಲವೇ? ನೀವು ಅವರನ್ನು ಸಂಖ್ಯೆಗಳಿಂದ ಗುರುತಿಸಲು ಕೇಳುತ್ತೀರಾ?" ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಪ್ರಶ್ನಿಸಿದರು. ವಿದ್ಯಾರ್ಥಿಗಳಿಗೆ ಒಟ್ಟಿಗೆ ಅಧ್ಯಯನ ಮಾಡಲು ಅವಕಾಶ ಮಾಡಿಕೊಡಿ ಎಂದೂ ನ್ಯಾಯಮೂರ್ತಿ ಖನ್ನಾ ಹೇಳಿದರು.
ಇದೇನು ಇಷ್ಟು ವರ್ಷಗಳ ಕಾಲ ಇಲ್ಲದಂತಹ ನಿಯಮ ಈಗ ಯಾಕೆ ತಂದಿದ್ದೀರಿ? ನಿಮಗೆ ಏಕಾಏಕಿ ಈಗ ಧರ್ಮವಿದೆ ಎಂದು ನೆನಪಾದದ್ದೆ? ನೀವು ಈ ರೀತಿಯ ಆದೇಶ ಹೊರಡಿಸಿರುವುದು ದುರದೃಷ್ಟಕರ ಎಂದು ನ್ಯಾಯಮೂರ್ತಿ ಸಂಜಯ್ ಕುಮಾರ್ ಹೇಳಿದರು.
ಮಹಿಳೆಯರು ಯಾವ ರೀತಿಯ ವಸ್ತ್ರ ಧರಿಸಬೇಕು ಎಂದು ಹೇಳಿ ನೀವು ಯಾವ ರೀತಿಯ ಮಹಿಳಾ ಸಬಲೀಕರಣ ಮಾಡುತ್ತಿದ್ದೀರಿ ಎಂದು ನ್ಯಾಯಮೂರ್ತಿ ಖನ್ನಾ ಪ್ರಶ್ನಿಸಿದರು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅನುಮತಿಸಿದರೆ ಹಿಂದು ವಿದ್ಯಾರ್ಥಿಗಳು ಕೇಸರಿ ಶಾಲ್‌ಗಳನ್ನು ಧರಿಸಬಹುದು ಮತ್ತು ಈ ಸನ್ನಿವೇಶವನ್ನು ಇದನ್ನು ರಾಜಕೀಯ ಶಕ್ತಿಗಳು ದುರ್ಬಳಕೆ ಮಾಡಬಹುದು ಎಂದು ಕಾಲೇಜು ತನ್ನ ವಾದ ಮಂಡನೆ ವೇಳೆ ತಿಳಿಸಿತ್ತು.
ತನ್ನ ಮಧ್ಯಂತರ ಆದೇಶವನ್ನು ದುರ್ಬಳಕೆ ಮಾಡಬಾರದು ಎಂದು ಹೇಳಿದ ನ್ಯಾಯಾಲಯ ಹಾಗೇನಾದರೂ ಆದಲ್ಲಿ ನ್ಯಾಯಾಲಯದ ಕದ ತಟ್ಟಬಹುದು ಎಂದು ಕಾಲೇಜಿಗೆ ಹೇಳಿದೆ. ಆದರೆ ವಿದ್ಯಾರ್ಥಿನಿಯರು ತರಗತಿ ಒಳಗೆ ಬುರ್ಖಾ ಧರಿಸಬಾರದು ಮತ್ತು ಕ್ಯಾಂಪಸ್‌ನಲ್ಲಿ ಧಾರ್ಮಿಕ ಚಟುವಟಿಕೆಗಳಿಗೆ ಅನುಮತಿಸಬಾರದು ಎಂದು ನ್ಯಾಯಾಲಯ ಹೇಳಿದೆ.
ಮುಂಬೈನ ಕಾಲೇಜೊಂದರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಯುನಿಟ್ ಪರೀಕ್ಷೆಗಳಿರುವುದರಿಂದ ತುರ್ತು ವಿಚಾರಣೆಗೆ ಕೋರಲಾಗಿತ್ತು. ಈ ಹಿಂದೆ ಜೂನ್ 26ರಂದು ಹೈಕೋರ್ಟ್ ತಾನು ಕಾಲೇಜಿನ ತೀರ್ಮಾನದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಹೇಳಿತ್ತು.