ಹಿಂದುಳಿದವರಿಗೆ ಕೋಟಾ ನಿಗದಿಪಡಿಸದಿದ್ದರೆ ಮಹಿಳಾ ಮೀಸಲಾತಿ ಜಾರಿಗೆ ಅವಕಾಶ ನೀಡಲಾರೆ: ಉಮಾಭಾರತಿ

Update: 2023-09-24 03:33 GMT

ಭೋಪಾಲ್: ಮಹಿಳಾ ಮೀಸಲಾತಿಯಲ್ಲಿ ಹಿಂದುಳಿದ ವರ್ಗಗಳ ಕೋಟಾ ನಿಗದಿಪಡಿಸುವವರೆಗೆ ಅದರ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ನಾಯಕಿ ಹಾಗೂ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ  ಹೇಳಿದ್ದಾರೆ.

"ನಾನು ದೇಶದ ಅರ್ಧದಷ್ಟು ಜನರನ್ನು ಪ್ರತಿನಿಧಿಸುತ್ತೇನೆ. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ನಾವು ಆಂಗೀಕರಿಸಿದ್ದೇವೆ. ಆದರೆ ಇತರ ಹಿಂದುಳಿದ ವರ್ಗಗಳನ್ನು ಗಣನೆಗೆ ತೆಗೆದುಕೊಳ್ಳುವವರೆಗೆ ಇದರ ಅನುಷ್ಠಾನಕ್ಕೆ ಅವಕಾಶ ನೀಡುವುದಿಲ್ಲ" ಎಂದು ಸುದ್ದಿಗಾರರ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದ್ದಾರೆ.

ಹಿಂದುಳಿದ ವರ್ಗ ಸಮಾಜದಲ್ಲಿ ದೊಡ್ಡ ಪಾಲು ಹೊಂದಿದೆ. ಮುಂಬರುವ ಚುನಾವಣೆಗಳಲ್ಲಿ ಮಹಿಳೆಯರಿಗೆ ಶೇಕಡ 50ರಷ್ಟು ಮೀಸಲಾತಿ ಒದಗಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಅದರಲ್ಲೂ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೂ ಮೀಸಲಾತಿ ಒದಗಿಸಬೇಕು" ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಮೀಸಲಾತಿ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವ ಉಮಾಭಾರತಿಯವರು, ಮಹಿಳೆಯರಿಗೆ ಶಾಸನಸಭೆಗಳಲ್ಲಿ ನೀಡುವ ಶೇಕಡ 33ರಷ್ಟು ಮೀಸಲಾತಿಯಲ್ಲಿ ಅರ್ಧದಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು ಎಂದು ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News